ಮಂಗಳೂರು ಪಾಲಿಕೆ ಮೇಯರ್ ಸ್ಥಾನದ ಅವಧಿ ಮುಗಿಯುತ್ತಿದ್ದು, ನೂತನ ಮೇಯರ್ ಸ್ಥಾನವನ್ನು ಮುಸ್ಲಿಂ ಸಮುದಾಯದವರಿಗೆ ನೀಡಬೇಕು ಎನ್ನುವ ಒತ್ತಡ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರವಾಗುತ್ತಿದೆ.
ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯು ಜರುಗಿದ್ದು, ಈ ವೇಳೆ ಒಮ್ಮತದ ನಿರ್ಣಯ ಮಾಡಲಾಗಿದ್ದು, ಕೊಡುವುದಿದ್ದರೆ ನಮಗೆ ಮೇಯರ್ ಸ್ಥಾನ ಕೊಡಿ. ಉಪ ಮೇಯರ್ ಸ್ಥಾನವನ್ನು ಕೊಟ್ಟು ತೃಪ್ತಿ ಪಡಿಸುವುದು ಬೇಡ. ಒಂದು ವೇಳೆ ಪಕ್ಷದ ಮುಖಂಡರು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜಿನಾಮೆಯನ್ನು ಕೊಡುತ್ತೇವೆ ಎಂದು ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರು ತೀರ್ಮಾನಕ್ಕೆ ಬಂದಿದ್ದಾರೆ.
ಮೊದಲ ಅವಧಿಯಲ್ಲಿ ಬಂಟರಿಗೆ, ಎರಡನೇ ಅವಧಿಯಲ್ಲಿ ಕ್ರೈಸ್ತರಿಗೆ, ಮೂರನೇ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ, ನಾಲ್ಕನೇ ಅವಧಿಯಲ್ಲಿ ಬಿಲ್ಲವರಿಗೆ ಸ್ಥಾನ ನೀಡಲಾಗಿದೆ. ಈ ಬಾರಿ ಮೇಯರ್ ಸ್ಥಾನ ಮುಸ್ಲಿಮರಿಗೆ ನೀಡಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡಲು ಸಿದ್ಧ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಮ್ ಪಾಲ್ಗೊಂಡಿದ್ದರು.