Saturday, November 23, 2024
ಸುದ್ದಿ

Breaking News : ಮದ್ಯಪ್ರಿಯರಿಗೆ ಗುಡ್‍ನ್ಯೂಸ್ ; ಮೇ 4 ರಿಂದ ದೇಶಾದ್ಯಂತ ಸಿಗುತ್ತೆ ಎಣ್ಣೆ – ಕಹಳೆ ನ್ಯೂಸ್

ನವದೆಹಲಿ: ಹಸಿರು ವಲಯದ ಜಿಲ್ಲೆಯಲ್ಲಿರುವ ಮದ್ಯಪ್ರಿಯರಿಗೆ ಗುಡ್‍ನ್ಯೂಸ್. ಕೊರೊನಾ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಮೇ 4 ರಿಂದ ಎಣ್ಣೆ ಸಿಗಲಿದೆ.

ಕೇಂದ್ರ ಸರ್ಕಾರ ಮತ್ತೆ ಮೂರು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸಿದ್ದು, ಮೇ 17ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಈ ಅವಧಿಯಲ್ಲಿ ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯ ಮಾರಾಟದ ಜೊತೆ ಪಾನ್ ಅಂಗಡಿ ತೆರೆಯಲು ಅನುಮತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದರೂ ಷರತ್ತು ವಿಧಿಸಿದೆ. ಅಂಗಡಿಯಲ್ಲಿ ಕುಡಿಯುವಂತಿಲ್ಲ. ಪಾರ್ಸೆಲ್ ಗೆ ಮಾತ್ರ ಅನುಮತಿ. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಬಾರಿ 5 ಜನ ಅಂಗಡಿಯ ಮುಂದೆ ನಿಲ್ಲಬಹುದು. ವ್ಯಕ್ತಿಗಳು ಕನಿಷ್ಟ 6 ಅಡಿ ಅಂತರದಲ್ಲಿ ನಿಲ್ಲಬೇಕು ಎಂದು ಷರತ್ತು ವಿಧಿಸಿದೆ. ಹಸಿರು ವಲಯಲ್ಲಿ ಮಾತ್ರ ಅನುಮತಿ ನೀಡಿದ್ದು, ಕೆಂಪು ವಲಯ ಮತ್ತು ಕಿತ್ತಾಳೆ ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ.

ಕೇಂದ್ರ ಸರ್ಕಾರ ಕೊರೊನಾ ಪೀಡಿತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಇಂದು ಪರಿಷ್ಕರಿಸಿದೆ. ಕಿತ್ತಾಳೆ ವಲಯದಲ್ಲಿದ್ದ ಜಿಲ್ಲೆಗಳನ್ನು ಹಸಿರು ವಲಯಕ್ಕೂ, ಕೆಂಪು ವಲಯದಲ್ಲಿದ್ದ ಜಿಲ್ಲೆಗಳು ಕಿತ್ತಾಳೆ ವಲಯದಲ್ಲಿ ಸ್ಥಾನ ಪಡೆದಿದೆ. ಈ ಮೊದಲು ಕೊರೊನಾ ಪ್ರಕರಣ ದಾಖಲಾಗದ ಜಿಲ್ಲೆಗಳು ಹಸಿರು ವಲಯದಲ್ಲೂ, ಕಡಿಮೆ ಪ್ರಕರಣ ದಾಖಲಾದ ಜಿಲ್ಲೆಗಳು ಕಿತ್ತಾಳೆ ವಲಯಕ್ಕೂ, ಅತಿ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳು ಕೆಂಪು ವಲಯದಲ್ಲಿ ಸ್ಥಾನ ಪಡೆಯುತ್ತಿತ್ತು.

 

14 ದಿನಗಳಿಂದ ಯಾವುದೇ ಪ್ರಕರಣ ಬೆಳಕಿಗೆ ಬಾರದೇ ಇದ್ದಲ್ಲಿ ಕಿತ್ತಾಳೆ ವಲಯದಲ್ಲಿದ್ದ ಜಿಲ್ಲೆ ಹಸಿರು ಜಿಲ್ಲೆಯಾಗುತ್ತಿತ್ತು. ಕೆಂಪು ವಲಯಲ್ಲಿದ್ದ ಜಿಲ್ಲೆಯಲ್ಲಿ 14 ದಿನಗಳ ಕಾಲ ಕೊರೊನಾ ಬಾರದೇ ಇದ್ದಲ್ಲಿ ಕಿತ್ತಾಳೆ ವಲಯದಲ್ಲಿ, ಬಳಿಕ 14 ದಿನಗಳ ಕಾಲ ಯಾವುದೇ ಪ್ರಕರಣ ಬಾರದೇ ಇದ್ದಲ್ಲಿ ಹಸಿರು ವಲಯದಲ್ಲಿ ಸ್ಥಾನ ಪಡೆಯುತ್ತಿತ್ತು.

ಹೊಸ ಮಾನದಂಡ ಏನು?
ಈ ಮೊದಲು ಪ್ರಕರಣಗಳು ದ್ವಿಗುಣವಾಗುವುದರ ಮೇಲೆ ಕೆಂಪು, ಕಿತ್ತಾಳೆ, ಹಸಿರು ವಲಯಗಳನ್ನು ಪ್ರಕಟಿಸಲಾಗುತ್ತಿತ್ತು. ಈಗ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಪರಿಷ್ಕರಣೆಗೊಳಿಸಲಾಗಿದೆ. ಹೊಸದಾಗಿ ಎಷ್ಟು ಪ್ರಕರಣಗಳು ದಾಖಲಾಗುತ್ತಿದೆ? ಎಷ್ಟು ದಿನಕ್ಕೆ ಪ್ರಕರಣ ದ್ವಿಗುಣವಾಗುತ್ತಿದೆ? ಎಷ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ? ಎಷ್ಟು ಪರೀಕ್ಷೆ ನಡೆಯುತ್ತಿದೆ? ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹೇಗಿದೆ? ಈ ಮಾನದಂಡಗಳನ್ನು ಆಧಾರಿಸಿ ಪರಿಷ್ಕೃತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದನ್ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ಪ್ರತಿ ವಾರಕ್ಕೊಮ್ಮೆ ಈ ಪಟ್ಟಿ ಬದಲಾಗುತ್ತದೆ. ಪ್ರಸ್ತುತ ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಾಳೆ, 319 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ಪರಿಷ್ಕರಣೆಯಿಂದಾಗಿ ಕರ್ನಾಟಕದಲ್ಲಿ 3 ಜಿಲ್ಲೆಗಳು ಕೆಂಪು ವಲಯದಲ್ಲಿ, 13 ಜಿಲ್ಲೆಗಳು ಕಿತ್ತಾಳೆ ವಲಯದಲ್ಲಿ, 14 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ, ಚಿಕ್ಕಬಳ್ಳಾಪುರವನ್ನು ಕೆಂಪು ವಲಯದಿಂದ ಕೈಬಿಟ್ಟಿದೆ.

ಯಾವ ಜಿಲ್ಲೆ ಯಾವ ವಲಯದಲ್ಲಿದೆ?
ಕೆಂಪು ವಲಯ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು

ಕಿತ್ತಾಳೆ ವಲಯ: ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ್, ಉತ್ತರ ಕನ್ನಡ, ತುಮಕೂರು.

ಹಸಿರು ವಲಯ: ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ.