ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕಾಲ ಕಳೆಯಲು ಅನುಕೂಲವಾಗುವಂತೆ ಸರ್ಕಾರ ಹಳೆಯ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. ಆದರೆ 33 ವರ್ಷಗಳ ನಂತರ ಮತ್ತೆ ಸೀರಿಯಲ್ ಪ್ರಾರಂಭವಾದರೂ ಇದೀಗ ‘ರಾಮಾಯಣ’ ಧಾರಾವಾಹಿ ವಿಶ್ವ ದಾಖಲೆ ನಿರ್ಮಿಸಿದೆ.
ಲಾಕ್‍ಡೌನ್ ಅವಧಿಯಲ್ಲಿ ಜನರ ಬೇಸರ ಕಳೆಯುವ ಉದ್ದೇಶದಿಂದ ದೂರದರ್ಶನ ‘ರಾಮಾಯಣ’ ಧಾರಾವಾಹಿಯನ್ನು ದಿನದ ಎರಡು ಸಮಯ ಮರು ಪ್ರಸಾರ ಆರಂಭಿಸಿತ್ತು. ಇದು ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡಿತು. ಈ ಬಗ್ಗೆ ಸ್ವತಃ ದೂರದರ್ಶನ ಟ್ವೀಟ್ ಮಾಡುವ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿದೆ.
ದೂರದರ್ಶನ ಮಾಹಿತಿ ನೀಡಿರುವ ಪ್ರಕಾರ ಮರು ಪ್ರಸಾರವಾದ ‘ರಾಮಾಯಣ’ ವಿಶ್ವದಾಖಲೆಯನ್ನೇ ಬರೆದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಯನ್ನು ಸಹ ‘ರಾಮಾಯಣ’ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಮರು ಪ್ರಸಾರವು ವಿಶ್ವದಾದ್ಯಂತ ವೀಕ್ಷಕರ ದಾಖಲೆಗಳನ್ನು ಬ್ರೇಕ್ ಮಾಡಿದೆ. ಏಪ್ರಿಲ್ 16ರ ವೇಳೆಗೆ 7.7 ಕೋಟಿ ವೀವರ್ಸ್ ಪಡೆದುಕೊಳ್ಳುವ ಮೂಲಕ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮ ಎನಿಸಿಕೊಂಡಿದೆ” ಎಂದು ದೂರದರ್ಶನ ಟ್ವೀಟ್ ಮಾಡಿದೆ.
ಸಾರ್ವಜನಿಕ ಬೇಡಿಕೆಯ ಮೇರೆಗೆ ಮಾರ್ಚ್ 28ರಿಂದ ಮತ್ತೆ ರಾಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ಈ ಸೀರಿಯಲ್ ದಿನಕ್ಕೆ ಎರಡು ಬಾರಿ ಡಿಡಿ ನ್ಯಾಷನಲ್ ಚಾನೆಲ್‍ನಲ್ಲಿ ಪ್ರಸಾರವಾಗುತ್ತಿತ್ತು. ದೂರದರ್ಶನವು ‘ರಾಮಾಯಣ’ ಸೀರಿಯಲ್ ಮಾತ್ರವಲ್ಲದೇ ‘ಮಹಾಭಾರತ’, ‘ಶ್ರೀ ಕೃಷ್ಣ’ ಮತ್ತು ‘ಉತ್ತರ ರಾಮಾಯಣ’ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ.
‘ರಾಮಾಯಣ’ ಧಾರಾವಾಹಿ ದೇಶದಲ್ಲಿ ಮೊದಲ ಬಾರಿಗೆ ಜನವರಿ 25, 1987 ರಿಂದ ಜುಲೈ 31, 1988 ರವರೆಗೆ ಪ್ರಸಾರವಾಗಿದೆ. 1987 ರಿಂದ 1988 ರವರೆಗೆ ‘ರಾಮಾಯಣ’ ವಿಶ್ವದಲ್ಲೇ ಹೆಚ್ಚು ವೀಕ್ಷಿಸಿದ ಧಾರಾವಾಹಿ ಆಗಿತ್ತು. ಅಲ್ಲದೇ ಇದು ಲಿಮ್ಕಾ ಬುಕ್ ಆಫ್ ರೆಕಾರ್ಟ್ ನಲ್ಲಿ ‘ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ಪೌರಾಣಿಕ ಧಾರಾವಾಹಿ’ ಎಂದು ದಾಖಲೆ ಬರೆದಿತ್ತು.
ಲಾಕ್‍ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾಗುತ್ತಿರುವ ಚಾನೆಲ್‍ಗಳ ಪಟ್ಟಿಯಲ್ಲಿ ಡಿಡಿ ನ್ಯಾಷನಲ್ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ‘ರಾಮಾಯಣ’ ಧಾರಾವಾಹಿ ಏಪ್ರಿಲ್ 18ರಂದು ಮುಕ್ತಾಯವಾದ ನಂತರ ಅದರ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.