ಕೊರೊನಾ ಭೀತಿ – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ವೈಟ್‌ಹೌಸ್‌ನಲ್ಲಿ ಹಿಂದು ಪುರೋಹಿತರೊಬ್ಬರಿಂದ ಶಾಂತಿ ಮಂತ್ರ ಪಠಣ – ಕಹಳೆ ನ್ಯೂಸ್
ವಾಷಿಂಗ್ಟನ್, ಮೇ 08 : ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷೇಮಕ್ಕಾಗಿ ಹಿಂದೂ ಪುರೋಹಿತರೊಬ್ಬರು ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಗುರುವಾರ ಶಾಂತಿ ಮಂತ್ರ ಪಠಣ ಮಾಡಿದರು.
ಅಮೆರಿಕದ ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನ ವೈಟ್ ಹೌಸ್‌ನಲ್ಲಿ ಎಲ್ಲಾ ಧರ್ಮಗುರುಗಳಿಂಧ ಶಾಂತಿ ಪ್ರಾರ್ಥನೆ ಮಾಡಿಸಲಾಯಿತು. ಈ ನಿಟ್ಟಿನಲ್ಲಿ ಹಿಂದು ಪುರೋಹಿತರೊಬ್ಬರಿಂದ ಶಾಂತಿ ಮಂತ್ರ ಪಠಣ ನಡೆಯಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಪುರೋಹಿತ ಹರೀಶ್ ಬ್ರಹ್ಮಭಟ್ ಅವರು ವೈಟ್‌ಹೌಸ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂತ್ರ ಪಠಣ ನೆರವೇರಿಸಿದರು.
ಕೊರೊನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಈ ಸಮಯದಲ್ಲಿ ಜನರು ಭಯಭೀತರಾಗುವುದು ಅಥವಾ ಅವರ ಶಾಂತಿಗೆ ಭಂಗವಾಗುವುದು ಸಹಜ. ಶಾಂತಿ ಮಂತ್ರ ಪಠಣವು, ಲೌಕಿಕ ಸಂಪತ್ತು, ಯಶಸ್ಸು, ಖ್ಯಾತಿಯನ್ನೂ ಮೀರಿ ಶಾಂತಿಗಾಗಿ ಸಲ್ಲುವ ಪ್ರಾರ್ಥನೆಯಾಗಿದೆ ಎಂದು ವೈಟ್ ಹೌಸ್‌ನ ರೋಸ್ ಗಾರ್ಡನ್‌ನಲ್ಲಿ ಹರೀಶ್ ಬ್ರಹ್ಮಭಟ್ ತಿಳಿಸಿದರು.
ಪ್ರಾರ್ಥನೆ, ಮಂತ್ರ ಪಠಣ ಮಾಡಿರುವ ಹರೀಶ್ ಬ್ರಹ್ಮಭಟ್ ಅವರಗೆ ಟ್ರಂಪ್ ಅವರು ಧನ್ಯವಾದ ಸಲ್ಲಿಸಿದರು.