ಚಿತ್ರದುರ್ಗ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕೊರೊನಾ ವಲಯಗಳ ಪಟ್ಟಿಯಲ್ಲಿ ಗ್ರೀನ್ ಝೋನ್‍ನಲ್ಲಿದ್ದ ಚಿತ್ರದುರ್ಗದಲ್ಲಿ ಮೂವರು ತಬ್ಲಿಘಿಗಳಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.
ಗುಜರಾತ್‍ನ ಅಹಮದಾಬಾದ್‍ನಿಂದ ಮೇ 5ರಂದು ಜಿಲ್ಲೆಗೆ ಬಂದಿದ್ದ 15 ಜನ ತಬ್ಲಿಘಿಗಳ ಪೈಕಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಡಿಎಚ್‍ಓ ಡಾ.ಪಾಲಾಕ್ಷ, ಗುಜರಾತ್‍ನಿಂದ ಬಂದಿದ್ದ ಮೂವರು ತಬ್ಲಿಘಿಗಳಿಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ 12 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ. ಈಗಾಗಲೇ ಸೋಂಕಿತರನ್ನು ಪ್ರತ್ಯೇಕವಾಗಿರಸಲಾಗಿದೆ. ಜೊತೆಗೆ ಎಸ್‍ಜೆಎಂ ಸರ್ಕಲ್‍ನಲ್ಲಿರುವ ಸರ್ಕಾರಿ ಹಾಸ್ಟಲ್ ಪ್ರದೇಶವನ್ನು ಸೀಲ್‍ಡೌನ್ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇಂದು ಮೂವರಿಗೆ ಕೊರೊನಾ ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಎಷ್ಟು ಜನರಿಗೆ ತಗಲುತ್ತದೆ ಎನ್ನುವ ಆತಂಕ ಹೆಚ್ಚಾಗಿದೆ. ಕಟ್ಟುನಿಟ್ಟಿನ ನಿಯಮ ಪಾಲನೆ ಮೂಲಕ ಜಿಲ್ಲೆ ಗ್ರೀನ್ ಝೋನ್‍ನಲ್ಲಿತ್ತು. ಆದರೆ ಈಗ ಅಹಮದಾಬಾದ್‍ನಿಂದ ಬಂದ ತಬ್ಲಿಘಿಗಳಿಂದ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೊರೊನಾ ಹರಡದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಹಿಂದೆ ಏನಾಗಿತ್ತು?:
ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ಜಿಲ್ಲೆಯ 15 ಜನರು ತೆರಳಿದ್ದರು. ಆದರೆ ಲಾಕ್‍ಡೌನ್ ನಿಂದಾಗಿ ಅಹಮದಾಬಾದ್‍ನಲ್ಲಿ ಉಳಿದ್ದ ಅವರು ಲಾಕ್‍ಡೌನ್ ಸಡಿಲಿಕೆಯಿಂದಾಗಿ ಮೇ 4ರಂದು ಗುಜರಾತಿನಿಂದ ಪ್ರಯಾಣ ಬೆಳೆಸಿ ಮೇ 5ರಂದು ಅವರ ಸ್ವಗ್ರಾಮಗಳಿಗೆ ತೆರಳಲು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಇದರಿಂದ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದರು. ಅವರೊಂದಿಗೆ ತಮಕೂರಿನ 18 ಜನ ತಬ್ಲಿಘಿಗಳು ಕೂಡ ಇದ್ದರು. ಹೀಗಾಗಿ ಅವರನ್ನು ತುಮಕೂರಿಗೆ ಕಳುಹಿಸಿ, ಜಿಲ್ಲೆಯ 15 ಜನರನ್ನು ಮಾತ್ರ ಎಸ್‍ಜೆಎಂ ಸರ್ಕಲ್‍ನಲ್ಲಿರುವ ಸರ್ಕಾರಿ ಹಾಸ್ಟಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.