ಬೆಂಗಳೂರು: ಪಾದರಾಯನಪುರದಲ್ಲಿ ಮತ್ತೆ ಪುಂಡಾಟಿಕೆ ಶುರುವಾಗುತ್ತಿದಿಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಈ ಹಿಂದೆ ಪುಂಡಾಟಿಕೆ ನಡೆದಿದ್ದ ಜಾಗದಲ್ಲೇ ಮತ್ತೆ ಪೊಲೀಸರ ಜೊತೆ ಜನರು ವಾಗ್ವಾದ ಮಾಡುತ್ತಿದ್ದಾರೆ.
ಪೊಲೀಸರು ಹಾಗೂ ಪಾದರಾಯನಪುರದ ಜನರ ನಡುವೆ ಮಾತಿನ ಚಕಮಕಿ ನಡೆದಿದೆ. ಯಾವುದೇ ಕಾರಣಕ್ಕೂ ಒಳಗೆ, ಹೊರಗೆ ಹೋಗಲು ಬಿಡಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಜನರು ಗುಂಪು ಗುಂಪಾಗಿ ಬ್ಯಾರಿಕೇಡ್ ಬಳಿ ಬಂದು ಗಲಾಟೆ ಮಾಡಿದ್ದಾರೆ. ಯಾವುದೇ ಸಬೂಬು ಹೇಳಿದರೂ ಬಿಡದೇ ಎಲ್ಲರನ್ನೂ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
ಪಾದರಾಯನಪುರದಲ್ಲಿ ಒಂದೇ ದಿನ ಏಳು ಸೋಂಕಿತರು ಪತ್ತೆಯಾದರೂ ಜನರು ಮಾತ್ರ ಕೇರ್ ಮಾಡದೆ ಸುಮ್ಮನೆ ಓಡಾಡುತ್ತಿದ್ದಾರೆ. ತುಂಬಾ ಕಠಿಣ ಸೀಲ್‍ಡೌನ್ ಅಂತ ಆರೋಗ್ಯ ಇಲಾಖೆ ಹೇಳಿದರೂ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಅಲ್ಲದೇ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಹೀಗಾಗಿ ಪೊಲೀಸರು 11ನೇ ಕ್ರಾಸ್ ಒಳಗೆ ಯಾರಿಗೂ ಎಂಟ್ರಿ ಕೊಡುತ್ತಿಲ್ಲ. ಅಷ್ಟೇ ಅಲ್ಲದೇ ಯಾರೂ ಹೊರಗೆ ಬರದಂತೆ ಬ್ಯಾರಿಕೆಡ್ ಹಾಕಿ ತಡೆಯುತ್ತಿದ್ದಾರೆ.
ಪಾದರಾಯನಪುರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಶುಕ್ರವಾರಕ್ಕಿಂತ ಇಂದು ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.