ಬೆಳ್ತಂಗಡಿ, ಮೇ 08 : ಮಂಗಳೂರು ಚಾರ್ಮಾಡಿ ರಸ್ತೆಯ ಚಾರ್ಮಾಡಿ ಘಾಟ್ ನ 8ನೇ ತಿರುವಿನ ಸಮೀಪ ಒಂಟಿ ಸಲಗವೊಂದು ರಸ್ತೆಗೆಳಿದು ಸವಾರರ ಆತಂಕಕ್ಕೆ ಕಾರಣವಾದ ಘಟನೆ ಗುರುವಾರ ನಡೆದಿದೆ.
ಸಂಜೆ 5.45 ಕ್ಕೆ ಚಾರ್ಮಾಡಿ ಘಾಟ್ 7-8ನೇ ತಿರುವಿನ ಮಧ್ಯೆ ಒಂಟಿ ಸಲಗ ರಸ್ತೆಯಲ್ಲಿ ತರಕಾರಿ ಸಾಗಾಟದ ವಾಹನ ಸವಾರರಿಗೆ ಎದುರಾಗಿದೆ. ಈ ಕುರಿತು ಸವಾರರಿಗೆ ತೊಂದರೆಯಾಗುವ ದೃಷ್ಟಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಬೆಳ್ತಂಗಡಿ ವಲಯ ಅರಣ್ಯಧಿಕಾರಿ ಸುಬ್ಬಯ್ಯ ನಾಯ್ಕ್ ಸಿಬಂದಿಗಳು ತೆರಳಿ ವಾಹನ ಸವಾರರಿಗೆ ತೆರಳದಂತೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಂಡರು.
ಕಳೆದ ಏ.8ರಂದು ಇದೇ ಸ್ಥಳದಲ್ಲಿ ಒಂಟಿ ಸಲಗ ತಡರಾತ್ರಿ ಪ್ರತ್ಯಕ್ಷವಾಗಿತ್ತು. ಕಳೆದ ಕೆಲದಿನಗಳಿಂದ ಲಾಕ್ ಡೌನ್ ಪರಿಣಾಮ ಮನುಷ್ಯರ ಓಡಾಟ, ವಾಹನಗಳ ಶಬ್ದಮಾಲಿನ್ಯ ಇಲ್ಲದಿರುವುದರಿಂದ ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.