ತಬ್ಲಿಘಿ ಬಳಿಕ ಅಜ್ಮೀರ ನಂಜು ; ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ – ಕಹಳೆ ನ್ಯೂಸ್
ಬೆಳಗಾವಿ/ಚಿಕ್ಕೋಡಿ: ಭಾನುವಾರ ಬೆಳಗಾವಿ ಜಿಲ್ಲೆಯ ಜನ ಸಂಡೇ ಮೂಡ್‍ನಲ್ಲಿರುವಾಗಲೇ ರಾಜ್ಯದ ಹೆಲ್ತ್ ಬುಲೆಟಿನ್ ದೊಡ್ಡ ಆಘಾತವನ್ನೇ ನೀಡಿದೆ. ಇಂದು ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲೆಟಿನ್ ನಲ್ಲಿ ಅಜ್ಮೀರದಿಂದ ಬೆಳಗಾವಿಗೆ ಮರಳಿ ಬಂದ 22 ಜನರಿಗೆ ಕೊರೊನಾ ಸೋಂಕು ಇರುವದು ದೃಢವಾಗಿದ್ದು, ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ 107ಕ್ಕೇ ಏರಿದೆ. ಕೊರೊನಾ ವೈರಸ್ ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹಾ ದಾಳಿ ನಡೆಸಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ 22 ಸೋಂಕಿತರು ಪತ್ತೆಯಾಗಿದ್ದು, ಇವರೆಲ್ಲರೂ ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ಭಾಗದವರು ಎಂದು ತಿಳಿದು ಬಂದಿದೆ.
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಸಿ ಮಂದಿರಗಳಲ್ಲಿ ಅಡುಗೆ ಕೆಲಸವನ್ನು ಈ ಕುಟುಂಬಗಳು ಮಾಡುತ್ತಿದ್ದವು. ತಬ್ಲಿಘ್ ಜಮಾತ್ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೀರ್ ರಿಟರ್ನ್ ನಂಟು ಶುರುವಾಗಿದೆ. ಅಜ್ಮೀರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ. ಅಜ್ಮೀರ ಪ್ರವಾಸಕ್ಕೆ ತೆರಳಿ ವಾಪಸ್ ರಾಜ್ಯಕ್ಕೆ ಆಗಮಿಸಿದ್ದ 38 ಜನ ಪ್ರವಾಸಿಗರಲ್ಲಿ 31 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಬೆಳಗಾವಿಯ 22 ಜನ ಹಾಗೂ 8 ಬಾಗಲಕೋಟೆಯವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ಮಾರ್ಚ್ 17ರಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 7 ಕುಟುಂಬಗಳ 38 ಜನ ಸೇರಿ ಅಜ್ಮೀರಕ್ಕೆ ಬೆಳಗಾವಿಯಿಂದ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು. ಮೂರು ದಿನ ಅಜ್ಮೀರ ಪ್ರವಾಸದ ಬಳಿಕ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ದಿನಗಳ ಕಾಲ ಅಜ್ಮೀರದಲ್ಲಿಯೇ ಉಳಿದಿದ್ದರು. ಬಳಿಕ ಅಜ್ಮೀರದಿಂದ ಅನುಮತಿ ಪಡೆದು ಮೇ. 3ರಂದು ಬೆಳಗಾವಿ ಗಡಿಯ ಕುಗನೊಳ್ಳಿಗೆ ಆಗಮಿಸಿದ್ದರು. ಬಳಿಕ ಜಿಲ್ಲಾಡಳಿತ ಅಜ್ಮೀರದಿಂದ ಬಂದ ಎಲ್ಲರನ್ನೂ ನಿಪ್ಪಾಣಿಯ ಗವಾನಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಹಾರಾಷ್ಟ್ರದ ಗಡಿಯಿಂದ ಈ ಕುಟುಂಬಗಳನ್ನು ಕರ್ನಾಟಕಕ್ಕೆ ಪ್ರವೇಶ ನೀಡಿ ಕ್ವಾರಂಟೈನ್ ಮಾಡಿಸಿದ್ದರು. ಹೀಗಾಗಿ ಎಸ್‍ಪಿ ಅವರ ಈ ನಿರ್ಧಾರದಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಈ ಕುಟುಂಬಗಳು ಬಂದ ಸಂದರ್ಭದಲ್ಲಿ ಇವರ ಕೆಲ ಸಂಬಂಧಿಗಳು ಹಾಗೂ ಅವರ ಸ್ನೇಹಿತರು ಅವರನ್ನು ಭೇಟಿ ಆಗಿ ಊಟ ನೀಡಿ ಬಂದಿದ್ದಾರೆ. ಈಗ ಅವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.