ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪಕ್ಷದಿಂದ ಉಪೇಂದ್ರ ಹೊರ ನಡೆಯುವ ಸಾಧ್ಯತೆಯಿದೆ.
ಹೌದು. ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಜೊತೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಬಂದ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನವೇ ಕೆಪಿಜೆಪಿ ಪಕ್ಷವನ್ನು ತ್ಯಜಿಸುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಮಹೇಶ್ ಗೌಡ ಹೆಸರಿನಲ್ಲಿ ಕೆಪಿಜಿಪಿ ನೊಂದಣಿಯಾಗಿದ್ದು, ಭಾನುವಾರ ಪಕ್ಷದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಮಹೇಶ್ ಗೌಡ ಇರಿಸಿದ ಬೇಡಿಕೆಗಳಿಗೆ ಉಪೇಂದ್ರ ಸಮ್ಮತಿ ನೀಡದ ಹಿನ್ನೆಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಒಂದು ವೇಳೆ ನನ್ನ ಬೇಡಿಕೆಗೆ ಒಪ್ಪಿಗೆ ನೀಡದೇ ಇದ್ದರೆ ಉಪೇಂದ್ರ ಅವರನ್ನು ಪಕ್ಷದಿಂದಲೇ ಉಚ್ಛಾಟಿಸುವುದಾಗಿ ಮಹೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಗೊಂದಲ ಮೂಡಿದ ಹಿನ್ನೆಲೆಯಲ್ಲಿ ಮಂಗಳವಾರ ಪಕ್ಷದ ಸಭೆ ಕರೆಯುವುದಾಗಿ ಉಪೇಂದ್ರ ತಿಳಿಸಿದ್ದಾರೆ.
ಪ್ರಜಾಕೀಯ ಮತ್ತು ರಾಜಕೀಯದ ಬಹು ದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ ದಯವಿಟ್ಟು ಕಾದು ನೋಡಿ. ಉಪೇಂದ್ರ.
— Upendra (@nimmaupendra) March 3, 2018