ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ. ಜನತೆಯಲ್ಲಿ ಭಯ ಉತ್ಪಾದಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ, ಅವರು ತಲ್ವಾರ್ ಹಿಡಿದವರಿಗೆ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಮಾ. 05 ರ ಸೋಮವಾರ ಬಂಟ್ವಾಳದಲ್ಲಿ ನಡೆದ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಟೀಲ್, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಾದರೆ ಸಿದ್ದರಾಮಯ್ಯನವರು ಸುಮ್ಮನಿರುತ್ತಾರೆ. ಅಲ್ಪಸಂಖ್ಯಾತರ ತುಷ್ಟೀಕರಣದ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಹಾರದಲ್ಲಿ ಜಂಗಲ್ ರಾಜ್ಯ ಮಾಡಿದ್ದ ಲಾಲು ಪ್ರಸಾದ್ ಯಾದವ್ ಈಗ ಜೈಲಿನಲ್ಲಿದ್ದಾರೆ, ಅದೇ ರೀತಿ ಕರ್ನಾಟಕವನ್ನು ಕೂಡಾ ಜಂಗಲ್ ರಾಜ್ಯ ಮಾಡಲು ಹೊರಟಿರುವ ಸಿದ್ದರಾಮಯ್ಯ ಮುಂದೆ ಜೈಲಿನಲ್ಲಿರುವ ಪರಿಸ್ಥಿತಿ ಬಂದೊದಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಸಚಿವ ರೈ ಮುಸ್ಲಿಂ ರ ಕೃಪೆಯಿಂದ ಸಚಿವನಾದೆ ಎನ್ನುತ್ತಾರೆ, ಸಾಧ್ಯವಾದರೆ ತನಗೆ ಮುಸ್ಲಿಂ ಮತಗಳೇ ಗೆಲ್ಲಲು ಸಾಕು ಎನ್ನುವ ಹೇಳಿಕೆ ನೀಡಲಿ ಎಂದು ಸವಾಲೆಸೆದರು.
ತುಳುನಾಡಿನಲ್ಲಿ ಮಾರಿ ಓಡಿಸುವ ಸಾಂಪ್ರದಾಯಿಕ ಹಬ್ಬವಿದೆ. ರಾಜ್ಯದಲ್ಲಿರುವ ಮೂರು ಮಾರಿಗಳನ್ನು ಓಡಿಸಲು ಜನಸುರಕ್ಷಾ ರ್ಯಾಲಿ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್, ಸಿದ್ದರಾಮಯ್ಯ, ಮತ್ತು ರಮಾನಾಥ ರೈ ಎಂಬ ಮಾರಿಗಳನ್ನು ಕೇರಳಕ್ಕೆ ಓಡಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.