Breaking News : ಕೊರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ವಿಶೇಷ ಹಣಕಾಸು ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ ಮೋದಿ..! ಏನೇನು ಹೇಳಿದ್ರು ಮೋದಿ..!? ಭಾಷಣದ ಸಂಪೂರ್ಣ ವಿವರಣೆ – ಕಹಳೆ ನ್ಯೂಸ್
ನವದೆಹಲಿ : ಲಾಕ್ ಡೌನ್ 4.0 ಊಹಹಾಪೋಹಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ -19 ಪ್ರೇರಿತ ಲಾಕ್‌ಡೌನ್ ಕುರಿತು ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಒಂದು ದಿನದ ಬಳಿಕ ಧಾನಿ ಮೋದಿ ಇಂದು ಸಂಜೆ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ಇಂದು ಪ್ರಧಾನಿ ಮೋದಿ ಹೇಳಿದ್ದೇನು?
– ನಮ್ಮ ಪೂರೈಕೆ ವ್ಯವಸ್ಥೆಯನ್ನು ನಾವಿಂದು ಸದೃಢಗೊಳಿಸಬೇಕಾಗಿದೆ.
– ನಾನಿಂದು ಹೊಸ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದ್ದೇನೆ
– 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಇದಾಗಿದ್ದು ಇದು ನಮ್ಮ ಜಿಡಿಪಿಯ 10 ಪ್ರತಿಶತವಾಗಿದೆ.
– ಆತ್ಮ ನಿರ್ಭರ ಭಾರತ ಸಂಕಲ್ಪವನ್ನು ಸಾಕಾರಗೊಳಿಸಲು ಈ ಆರ್ಥಿಕ ಪ್ಯಾಕೇಜ್ ಸಹಕಾರಿಯಾಗಲಿದೆ. ನಮ್ಮ ಗ್ರಾಮೋದ್ಯೋಗ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳನ್ನೂ ಸೇರಿದಂತೆ ಎಲ್ಲಾ ಉದ್ಯಮ ವಲಯಗಳಿಗೆ, ಶ್ರಮಜೀವಿಗಳಿಗೆ ಮತ್ತು ರೈತ ವರ್ಗಕ್ಕೆ ಬಲ
ಮುಂದಿನ ದಿನಗಳಲ್ಲಿ ಕೇಂದ್ರ ವಿತ್ತ ಸಚಿವರು ಈ ಪ್ಯಾಕೇಜ್ ನ ವಿವರಗಳನ್ನು ನಿಮ್ಮ ಮುಂದೆ ಇಡಲಿದ್ದಾರೆ.
– ಎಲ್ಲಾ ಸರಕಾರಿ ಯಂತ್ರಗಳೂ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಜನಧನ್, ಆಧಾರ್ ಆಧಾರಿತ ವ್ಯವಸ್ಥೆ ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಯ ಬಳಿಗೆ ಸರಕಾರದ ಸೌಲಭ್ಯವನ್ನು ತಲುಪಿಸಿದ ಉದಾಹರಣೆ ನಮ್ಮ ಮುಂದಿದೆ.
– ಈ ಪ್ಯಾಕೇಜ್ ನಮ್ಮ ಮೇಕ್ ಇನ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲಿದೆ.
– ವೈರಸ್ ಒಂದು ವಿಶ್ವವನ್ನೇ ತಲ್ಲಣಗೊಳಿಸಿದೆ ಹಾಗೂ ವಿಶ್ವವೇ ಇದರ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ.
– 21ನೇ ಶತಮಾನ ಭಾರತದ್ದಾಗಿದೆ ಎಂದು ಎಲ್ಲರೂ ನಂಬಿದ್ದಾರೆ.
– ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಧ್ಯೇಯವಾಗಲಿ
– ಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ 95 ಮಾಸ್ಕ್ ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು.
– ಆದರೆ ಇಂದು ಭಾರತದಲ್ಲಿ ದಿನಂಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದೆ.
– ವಿಶ್ವದಲ್ಲಿ ಇದೀಗ ಆರ್ಥಿಕ ಕೇಂದ್ರೀಕರಣ ವಿಕೇಂದ್ರಿಕೃತಗೊಂಡಿದೆ
– ವಸುದೈವ ಕುಟುಂಬ ಎಂಬುದು ನಮ್ಮ ಮೂಲಮಂತ್ರ. ಮತ್ತು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇದು ಸಾಬೀತುಗೊಂಡಿದೆ.
– ಭಾರತದ ಪ್ರಗತಿ ವಿಶ್ವ ಪ್ರಗತಿಯೊಂದಿಗೆ ಸಹಭಾಗಿತ್ವ ಹೊಂದಿದೆ. ಇದು ಪೋಲಿಯೋ ವಿಚಾರದಲ್ಲಿ, ಅಪೌಷ್ಠಿಕತೆ, ವಿಶ್ವ ಯೋಗ ದಿನ, ಸೌರ ಶಕ್ತಿ ಒಕ್ಕೂಟದ ವಿಚಾರಗಳಲ್ಲಿ ಈ ಅಂಶ ಈಗಾಗಲೇ ಸಾಬೀತುಗೊಂಡಿದೆ.
– ಪ್ರತೀ ಬಾರಿ ದೇಶ ಸಂಕಷ್ಟ ಒಂದರಿಂಧ ಪಾರಾಗುವ ಯತ್ನದಲ್ಲಿ ವಿಶ್ವವನ್ನೇ ಈ ಸಂಕಷ್ಟದಿಂದ ಪಾರು ಮಾಡಿಯೇ ಮುಂದುವರಿಯುತ್ತದೆ.
– ವಿಶ್ವ ಕಲ್ಯಾಣದ ರಸ್ತೆಯಲ್ಲಿ ನಮ್ಮ ನಿರ್ಧಾರ ಅಚಲವಾಗಿದೆ. ಈ ಶತಮಾನದ ಪ್ರಾರಂಭದಲ್ಲಿ ವೈ2ಕೆ ಸಂಕಟ ತಲೆದೋರಿದ್ದಾಗ ಆ ಸಂಕಟದಿಂದ ವಿಶ್ವವನ್ನು ಪಾರು ಮಾಡಿದ್ದು ಭಾರತದ ತಂತ್ರಜ್ಞರೇ.
– ಕಛ್ ಭೂಕಂಪದ ದಿನಗಳನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ಎಲ್ಲವೂ ಧ್ವಂಸಗೊಂಡಿತ್ತು. ಅಲ್ಲಿ ಮೃತ್ಯು ಚಾದರ ಹಾಸಿದಂತಿತ್ತು ಪರಿಸ್ಥಿತಿ. ಇನ್ನೆಂದೂ ಕಛ್ ಎದ್ದು ನಿಲ್ಲದು ಅಂದುಕೊಂಡಿದ್ದಾಗಲೇ ಕಛ್ ದೇಶದ ಮುಂದೆ ಹೊಸ ರೂಪದಲ್ಲಿ ಎದ್ದು ನಿಂತಿತು. ಇದು ಭಾರತದ ಸಂಕಲ್ಪ ಶಕ್ತಿಯ ದ್ಯೋತಕವಾಗಿದೆ.
– ಭಾರತದ ಅತ್ಮ ನಿರ್ಭರತೆ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ: ಆರ್ಥಿಕತೆ, ಮೂಲಭೂತ ಸೌಲಭ್ಯ, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ, ನಮ್ಮ ಭೌಗೋಳಿಕ ವೈವಿಧ್ಯತೆ ಹಾಗೂ ಬೇಡಿಕೆ ಎಂಬುದೇ ಈ ಐದು ಆಧಾರ ಸ್ತಂಭಗಳಾಗಿವೆ.