Recent Posts

Sunday, January 19, 2025
ಸುದ್ದಿ

ತ್ರಿಪುರದಲ್ಲಿ ಫಲಿತಾಂಶ ಬಂದ 48 ಗಂಟೆಗಳಲ್ಲಿ ‘ಲೆನಿನ್ ಪ್ರತಿಮೆ’ ಕೆಡವಿದ ಬಿಜೆಪಿ – ಕಹಳೆ ನ್ಯೂಸ್

ತ್ರಿಪುರ : ವಿಧಾನಸಭೆ ಚುನಾವಣಾ ಫಲಿತಾಂಶ ಬಂದ 48 ಗಂಟೆಗಳಲ್ಲೇ ಬಿಜೆಪಿ ಕಾರ್ಯಕರ್ತರು ತ್ರಿಪುರದಲ್ಲಿ ಕಮ್ಯೂನಿಷ್ಟರ ಐಕಾನ್ ಎಂದೇ ಬಿಂಬಿತವಾಗಿದ್ದ ‘ಲೆನಿನ್’ ಪ್ರತಿಮೆಯನ್ನು ಸೋಮವಾರ ನೆಲಸಮಗೊಳಿಸಿದ್ದಾರೆ.

ತ್ರಿಪುರ ದಕ್ಷಿಣದ ಬೆಲೋನಿಯಾ ಪಟ್ಟಣದ ಕಾಲೇಜು ಚೌಕದ ಕೇಂದ್ರದಲ್ಲಿ 5 ವರ್ಷಗಳ ಹಿಂದೆ ಈ ‘ಲೆನಿನ್’ ಪ್ರತಿಮೆಯನ್ನು ಕಮ್ಯುನಿಷ್ಟ್ ಸರ್ಕಾರ ಸ್ಥಾಪಿಸಿತ್ತು. ಇದೀಗ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಎಡಪಕ್ಷಗಳಿಗೆ ಶಾಕ್ ನೀಡಿರುವ ಬಿಜೆಪಿಯ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳೊಂದಿಗೆ ಲೆನಿನ್ ಪ್ರತಿಮೆಯನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಘಟನೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಜನ ಲೆನಿನ್ ಪ್ರತಿಮೆಯನ್ನು ಕೆಡವುತ್ತಿದ್ದಾರೆ, ಇದು ಎಲ್ಲೋ ರಷ್ಯಾದಲ್ಲಿ ಅಲ್ಲ, ತ್ರಿಪುರದಲ್ಲಿ ಎಂದು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಮೆ ಕೆಳಗೆ ಬೀಳುತ್ತಿದ್ದಂತೆ ಲೆನಿನ್ ತಲೆಯನ್ನು ಬೇರ್ಪಡಿಸಿ, ಫುಟ್ ಬಾಲ್ ಆಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾಗಿ ಸಿಪಿಐಎಂ ಬೆಲೋನಿಯಾ ಉಪವಿಭಾಗ ಕಾರ್ಯದರ್ಶಿ ತಪಸ್ ದತ್ತಾ ಆರೋಪಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಪಿಐಎಂ, ಇದು ಬಿಜೆಪಿಗೆ ಕಮ್ಯೂನಿಸಮ್ ಕುರಿತು ಇರುವ ಭಯವನ್ನು ತೋರಿಸುತ್ತದೆ ಎಂದು ಹೇಳಿದೆ. ಆದರೆ ಎಡಪಕ್ಷಗಳಿಂದ ತುಳಿತಕ್ಕೊಳಗಾದವರು ಈ ಪ್ರತಿಮೆಯನ್ನು ನೆಲಸಮಗೊಳಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಪ್ರತಿಮೆ ನೆಲಸಮಗೊಳಿಸಲು ಬಳಸಿದ ಜೆಸಿಬಿ ವಾಹನವನ್ನು ಚಾಲನೆ ಮಾಡಿದ ಅಶೀಷ್ ಪಾಲ್ ಎಂಬುವವರನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಪ್ರತಿಮೆ ನೆಲಕ್ಕುರುಳಿದ ಸ್ಥಿತಿಯಲ್ಲಿ ಅಲ್ಲಿಯೇ ಇದ್ದು, ಇಂದು ಅದನ್ನು ತೆರವುಗೊಳಿಸಿ ಪುರಸಭೆಗೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

3 ಲಕ್ಷ ವೆಚ್ಚದಲ್ಲಿ 11.5 ಅಡಿ ಎತ್ತರದ ಲೆನಿನ್ ಪ್ರತಿಮೆಯನ್ನು ಫೈಬರ್ ಗ್ಲಾಸ್ ನಿಂದ ಸ್ಥಳೀಯ ಕಲಾವಿದರೊಬ್ಬರಿಂದ ಕೆತ್ತಿಸಲಾಗಿತ್ತು. 2013 ರಲ್ಲಿ ಸಿಪಿಐಎಂ ಗೆದ್ದ ನಂತರ 21 ನೇ ಶತಮಾನದಲ್ಲಿ ಪಕ್ಷ ಅಧಿಕಾರದಲ್ಲಿ ಮುಂದುವರೆದ ಸ್ಮರಣಾರ್ಥವಾಗಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು.

ಜನರ ಆಕ್ರೋಶವೇ ಲೆನಿನ್ ಪ್ರತಿಮೆ ನೆಲಕ್ಕುರುಳಲು ಕಾರಣ ಎಂದು ಬಿಜೆಪಿ ದಕ್ಷಿಣ ಕಾರ್ಯದರ್ಶಿ ರಾಜುನಾಥ್ ಎಂಬುವವರು ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ವಿರೋಧವಿತ್ತು. ಪುರಸಭೆ ವತಿಯಿಂದ ಇದನ್ನು ನಿರ್ಮಿಸಲಾಗಿತ್ತು, ಅಂದರೆ ತೆರಿಗೆದಾರರ ಹಣವನ್ನು ಇದಕ್ಕೆ ಖರ್ಚು ಮಾಡಲಾಗಿತ್ತು. ಲೆನಿನ್ ಪ್ರತಿಮೆಗೆ ತೆರಿಗೆದಾರರ ಹಣವನ್ನೇಕೆ ಖರ್ಚು ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಸಿಪಿಐಎಂ ನ ಮಾಜಿ ಮುಖ್ಯಮಂತ್ರಿಯ ಪ್ರತಿಮೆಯಾಗಿದ್ದರೆ ಯಾರೂ ಮುಟ್ಟುತ್ತಿರಲಿಲ್ಲ, ಆದರೆ ಈ ವಿದೇಶಿಗ ಲೆನಿನ್ ನಿಂದ ನಮಗೇನು ಪ್ರಯೋಜನ ಎಂದು ಅವರು ಹೇಳಿದ್ದಾರೆ.

ವರದಿ : ಕಹಳೆ ನ್ಯೂಸ್