ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸಾವು ; ಕೊರೊನಾ ಶಂಕೆ – ಗಂಟಲ ದ್ರವ ತಪಾಸಣೆ ವರದಿಗಾಗಿ ಕಾಯುತ್ತಿದೆ ಉಡುಪಿ ಜಿಲ್ಲಾಡಳಿತ – ಕಹಳೆ ನ್ಯೂಸ್
ಉಡುಪಿ: ಮೇ ಮೊದಲ ವಾರದಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಉಡುಪಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಕುಂದಾಪುರ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಎರಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಜಿಲ್ಲೆಯ ಕುಂದಾಪುರ ತಾಲೂಕಿನ ವ್ಯಕ್ತಿಯೊಬ್ಬರು ಮಹಾರಾಷ್ಟ್ರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಮೇ ಮೊದಲ ವಾರದಲ್ಲಿ ಅವರು ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಮನೆಯಲ್ಲಿದ್ದ ಸಂದರ್ಭ ವ್ಯಕ್ತಿಗೆ ಅನಾರೋಗ್ಯ ಬಾಧಿಸಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವ್ಯಕ್ತಿಯನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಎರಡು ದಿನದ ಹಿಂದೆ ವ್ಯಕ್ತಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಮೃತ ವ್ಯಕ್ತಿಯ ಗಂಟಲ ದ್ರವವನ್ನು ತಪಾಸಣೆಗೆ ಮಂಗಳೂರಿಗೆ ಕಳುಹಿಸಲಾಗಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ವರದಿ ವೈದ್ಯಾಧಿಕಾರಿಗಳ ಕೈ ಸೇರುವ ಸಾಧ್ಯತೆ ಇದೆ.
ಕೊರೊನಾ ಪಾಸಿಟಿವ್ ಯಾವುದೇ ಲಕ್ಷಣಗಳು ವ್ಯಕ್ತಿಗೆ ಆರಂಭದ ಹಂತದಲ್ಲಿ ಇರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮೃತ ವೃದ್ಧನ ಗಂಟಲ ದ್ರವ ತಪಾಸಣೆ ವರದಿಗಾಗಿ ಉಡುಪಿ ಜಿಲ್ಲಾಡಳಿತ ಕಾಯುತ್ತಿದೆ. ಚಿಕಿತ್ಸೆ ಕೊಟ್ಟ ಮಣಿಪಾಲ ಕೆಎಂಸಿ ಸಿಬ್ಬಂದಿಯನ್ನು ಗುರುತಿಸುವ ಕೆಲಸ ಆಗುತ್ತಿದೆ.