ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ : ಮಾಲೀಕರಿಂದ ದೂರು ದಾಖಲು – ಕಹಳೆ ನ್ಯೂಸ್
ಉಡುಪಿ: ಪತ್ರಿಕೆಯೊಂದರಲ್ಲಿ ನೀಡಿದ್ದ ಜಾಹೀರಾತನ್ನು ತಿರುಚಿ ಸಂಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿರುವ ವ್ಯಕ್ತಿಯ ವಿರುದ್ದ ಉದ್ಯಾವರ ಜಯಲಕ್ಷ್ಮೀ ಸಿಲ್ಕ್ ಸಂಸ್ಥೆಯ ಮಾಲಕರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋವಿಡ್ 19 ಹರಡುವಿಕೆಯ ಹಿನ್ನಲೆಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಸಡಿಲಕೆಯಾದ ಪರಿಣಾಮ ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಯಲ್ಲಿ,
ಸರಕಾರ ನೀಡಿರುವ ನಿಯಮಾವಳಿಯಂತೆ ಸಾಮಾಜಿಕ ಅಂತರ ಪಾಲನೆ ಸಹಿತವಾಗಿ, ಉಚಿತ ವಾಹನ ಸೌಲಭ್ಯದೊಂದಿಗೆ ಜವುಳಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಈ ಬಗ್ಗೆ ನೀಡಲಾಗಿದ್ದ ಪತ್ರಿಕಾ ಜಾಹೀರಾತಿನ ಪ್ರಕಟಣೆಯಲ್ಲಿದ್ದ ಭಾಗವನ್ನು ತಿರುಚಿದ ಅಕ್ಬರ್ ಮೊಹಮ್ಮದ್ ಎಂಬಾತ ಆ ಭಾಗದಲ್ಲಿ ಒಂದು ಸಮುದಾಯದವರ ಗ್ರಾಹಕರ ಅಗತ್ಯವಿಲ್ಲ ಎಂಬ ಪೋಸ್ಟರ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ.
ಇದರಿಂದಾಗಿ ಸಂಸ್ಥೆಗೆ ಗ್ರಾಹಕರು ಭೇಟಿ ನೀಡಲು ಹಿಂಜರಿಯುವಂತಾಗಿದೆ ಎಂದು ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಪ್ರತಿಯನ್ನು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ನೀಡಲಾಗಿದೆ ಎಂದು ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ನ ಮಾಲಕರು ತಿಳಿಸಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪಿ ಬಹಿರಂಗವಾಗಿ ಕ್ಷಮಾಪಣೆ ಕೇಳಿದ್ದಾರೆ.
“ನಮಸ್ತೆ ಜಯಲಕ್ಷ್ಮೀ ಸಿಲ್ಕ್ಸ್ ಉದ್ಯಾವರ ಇದರ ಬಗ್ಗೆ ನನಗೊಂದು ಫೋಟೋ ವಾಟ್ಸಪ್ ಅಲ್ಲಿ ಬಂದಿತ್ತು.
ಅದರಲ್ಲಿ ಮುಸ್ಲಿಂ ಗ್ರಾಹಕರ ಅವಶ್ಯಕತೆ ಇಲ್ಲ ಎಂಬ ಪೋಸ್ಟರ್ ಇತ್ತು. ಆದ್ರೆ ಅದರ ಸತ್ಯಾ-ಸತ್ಯತೆ ಅರಿಯದೆ ನಾನು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಾಕಿದೆ.
ನಂತರ ಜಯಲಕ್ಷ್ಮೀ ಮಾಲೀಕರಿಂದ ಅದರ ಸತ್ಯತೆ ತಿಳಿದ ನಂತರ ನಾನು ಅದನ್ನ ಸಾಮಾಜಿಕ ಜಾಲತಾಣದಿಂದ ತೆಗೆದು ಅವರಲ್ಲಿ ಕ್ಷಮಾಪಣೆ ಕೇಳಿದೆ.
ಜಯಲಕ್ಷ್ಮೀ ಸಿಲ್ಕ್ಸ್ ಉದ್ಯಾವರ ಇವರಲ್ಲಿ ಯಾವುದೇ ಜಾತಿ-ಭೇದ ಇಲ್ಲ. ದಯವಿಟ್ಟು ಎಲ್ಲ ಗ್ರಾಹಕರು ಮೊದಲಿನಂತೆಯೇ ವ್ಯವಹರಿಸಿ ಹಾಗೂ ಯಾರು ಕೂಡ ಅಪಪ್ರಚಾರ ಮಾಡಬೇಡಿ” ಎಂದು ಕ್ಷಮಾಪಣೆ ಕೇಳಿದ್ದಾರೆ.