ರಾಮ್ ಗೋಪಾಲ್ ವರ್ಮಾ ಎಂದರೆ ಏನೋ ಒಂದು ವಿವಾದದ ವಸ್ತುವನ್ನು ಇಟ್ಟುಕೊಂಡೇ ಕಥೆಯನ್ನು ಹೆಣೆಯುತ್ತಾರೆ. ಅವರ ನಿರ್ದೇಶನದ ಸಿನಿಮಾ ಬರುತ್ತದೆ ಎಂದರೆ ಕುತೂಹಲ ಇದ್ದೇ ಇದುರುತ್ತದೆ. ಈಗಾಗಲೆ ಗಾಂಧಿ, ಗೋಡ್ಸೆ ಕುರಿತ ಹಲವಾರು ಸಿನಿಮಾಗಳು ಬಂದಿವೆ. ಇದೀಗ ಹೊಸ ದೃಷ್ಟಿಕೋನದಲ್ಲಿ ಗೋಡ್ಸೆ ಕುರಿತ ಸಿನಿಮಾ ತೆರೆಗೆ ತರುತ್ತಿರುವುದಾಗಿ ತಿಳಿಸಿದ್ದಾರೆ ಆರ್‌ಜಿವಿ.
ಬಾಲಿವುಡ್ ಸಿನಿಮಾ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಅವರು ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಕುರಿತಾದ ಸಿನಿಮಾವೊಂದನ್ನು ನಿರ್ಮಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಈ ಸಿನಿಮಾಗಾಗಿ ಈಗಾಗಲೇ ನಾನು ನಾಥೂರಾಮ್ ಗೋಡ್ಸೆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಮಾಡಿದ್ದೇನೆ. ಅವರು ಗಾಂಧೀಜಿಯವರನ್ನು ಕೊಲ್ಲಲು ಕಾರಣಗಳೇನು ಎಂಬ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ’ ಎಂದಿದ್ದಾರೆ.
‘ನಾಥೂರಾಮ್ ಗೋಡ್ಸೆಯವರು ವಿಲನ್ ಆಗಿಯೇ ಗುರುತಿಸಲ್ಪಟ್ಟಿದ್ದಾರೆ. ಆದರೆ ಅವರಿಗೆ ತಮ್ಮದೇ ಆದ ಕೆಲವು ದೃಷ್ಟಿಕೋನಗಳಿದ್ದವು. ಇವುಗಳಿಗೆ ಹೆಚ್ಚಿನ ಆದ್ಯತೆಯನ್ನು ಈ ಸಿನಿಮಾದಲ್ಲಿನೀಡಲಾಗುವ ಕಾರಣ ಇದರಲ್ಲಿಗಾಂಧಿ ಪಾತ್ರವನ್ನು ಅಲ್ಪಾವಧಿಗೆ ಸೀಮಿತಗೊಳಿಸುತ್ತೇನೆ’ ಎಂದು ಆರ್‌ಜಿವಿ ವಿವರಿಸಿದ್ದಾರೆ.
ಬಹುಭಾಷೆಗಳಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾಗೆ ‘ದಿ ಮ್ಯಾನ್ ಹು ಕಿಲ್‌ಡ್ ಗಾಂಧಿ’ ಎಂಬ ಟೈಟಲ್ ಇಡಲಾಗಿದ್ದು, ಇದರಲ್ಲಿ ಗೋಡ್ಸೆ ಅವರು ಗಾಂಧಿ ಹತ್ಯೆಯ ಸಂಚು ರೂಪಿಸಿದ್ದು ಹೇಗೆ ಮತ್ತು ಯಾಕೆ ಎಂಬುದನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗುವುದೆಂದು ಅವರು ಹೇಳಿದ್ದಾರೆ.
ನಾವು ಚಿಕ್ಕಂದಿನಿಂದಲೂ ಗೋಡ್ಸೆ ಎಂದರೆ ಗಾಂಧೀಜಿಯ ಹಂತಕ ಎಂಬುದನ್ನು ಕೇಳಿಯೇ ಬೆಳೆದಿದ್ದೇವೆ. ಆದರೆ ಒಂದು ಕಾಲದಲ್ಲಿ ಗಾಂಧೀಜಿಯ ಅನುಯಾಯಿಯಾಗಿದ್ದ ಮತ್ತು ಆವರೆಗೆ ಒಮ್ಮೆಯೂ ಗನ್ ಹಿಡಿದುಕೊಳ್ಳದ ಗೋಡ್ಸೆ ಏಕಾಏಕಿ ಗಾಂಧಿಯ ಹತ್ಯೆ ಮಾಡಲು ಕಾರಣವೇನು ಎಂಬುದನ್ನು ಈ ಸಿನಿಮಾ ಬಹಿರಂಗಪಡಿಸಲಿದೆ’ ಎಂದು ಆರ್‌ಜಿವಿ ತಿಳಿಸಿದ್ದಾರೆ.