ಪ್ರದರ್ಶನವಿಲ್ಲದೆ ಕಂಗೆಟ್ಟ ಯಕ್ಷ ಕಲಾವಿದರ ಬೆನ್ನುಲುಬಾಗಿ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ – ಕಹಳೆ ನ್ಯೂಸ್
ಮಂಗಳೂರು: ಪ್ರತಿ ವರ್ಷ ಮೇ ತಿಂಗಳಲ್ಲಿ ಪಟ್ಲ ಸಂಭ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದು ನಿರಂತರ ನಾಲ್ಕು ವರ್ಷಗಳ ಕಾಲ ಈ ಸಂದರ್ಭದಲ್ಲಿ ವಿವಿಧ ಸೇವಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.
ಪ್ರಸಕ್ತ ವರ್ಷದಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಮಹಾಮಾರಿಯಿಂದಾಗಿ” ಪಟ್ಲ ಸಂಭ್ರಮ 2020″ ರದ್ದುಮಾಡಿ, ಅದರ ಬದಲಾಗಿ ಕೊರೊನ ವೈರಸ್ ನಿಂದಾಗಿ ಯಕ್ಷಗಾನ ಪ್ರದರ್ಶನಗಳು ಇಲ್ಲದೆ ಕಂಗೆಟ್ಟ 1163 ಕಲಾವಿದರಿಗೆ, ಸುಮಾರು 20 -25 ದಿನಗಳಿಗೆ ಬೇಕಾದ ಅಕ್ಕಿ ಮತ್ತು ದಿನಸಿ ಸಮಾಗ್ರಿಗಳನ್ನು ವಿತರಿಸುವ ಮೂಲಕ ಕಲಾವಿದರ ಸಂಕಷ್ಟದಲ್ಲಿ ಕೈಜೋಡಿಸಿದ ಸಂತೃಪ್ತಿ ಭಾವನೆ ನಮಗಿದೆ ಎಂದು,
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.
ಕಾಸರಗೋಡು, ದ.ಕ ಜಿಲ್ಲೆ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಯಕ್ಷಗಾನ ಕಲಾವಿದರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂದು ಪಟ್ಲ ಸತೀಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳ ಅವಧಿಯಲ್ಲಿ 5 ಕೋಟಿ ರೂಪಾಯಿಗಳಿಗೂ ಮಿಕ್ಕಿದ ಮೊತ್ತವನ್ನು ವಿವಿಧ ಸೇವಾಯೋಜನೆಗಳಿಗೆ ವಿನಿಯೋಗಿಸಲಾಗಿದೆ. ಟ್ರಸ್ಟ್‌ನ ಪ್ರಮುಖವಾದ ಯೋಜನೆಗಳಲ್ಲಿ ಒಂದಾಗಿರುವ ಅಪಘಾತ ವಿಮಾ ಯೋಜನೆಯಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಸಹಯೋಗದಲ್ಲಿ, ಅಪಘಾತದಿಂದ ಸಂಕಷ್ಟಕ್ಕೆ ಒಳಗಾದ ಮತ್ತು ಮೃತಪಟ್ಟ ಓರ್ವ ಯಕ್ಷ ಕಲಾವಿದರೂ ಸೇರಿದಂತೆ ಸುಮಾರು 20 ರಿಂದ 25 ಲಕ್ಷ ರೂಪಾಯಿವರೆಗಿನ ಮೊತ್ತದ ವಿಮಾ ಪರಿಹಾರ ದೊರೆತಿದೆ.
ಈ ವಿಮಾ ಯೋಜನೆಯಲ್ಲಿ ಸುಮಾರು 850ಕ್ಕೂ ಮಿಕ್ಕಿ ಹೆಸರು ನೊಂದಾಯಿಸಿದ್ದು 31-5-2020ಕ್ಕೆ ಇದರ ಅವಧಿ ಮುಗಿಯಲಿದ್ದು, ಮರುನೊಂದಾವಣೆ ಮಾಡಬೇಕಾಗಿದೆ. ಆದ್ದರಿಂದ ಮೇ 30ನೇ ಶನಿವಾರ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಪಕ್ಕದ ಕರಂಗಲ್ಪಾಡಿ ಮಾರ್ಕೆಟಿನ ಎದುರುಗಡೆಯಿರುವ, ಎಸ್.ಎಲ್.ಚೇಂಬರ್ ನಲ್ಲಿರುವ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೆನೆಯ ಕಚೇರಿಯಲ್ಲಿ ತೆಂಕುತಿಟ್ಟಿನ ಕಲಾವಿದರಿಗೆ ಬೆಳಿಗ್ಗೆ 9.00 ರಿಂದ 2.00 ರ ತನಕ ಮತ್ತು ಬಡಗುತಿಟ್ಟಿನ ಯಕ್ಷ ಕಲಾವಿದರಿಗಾಗಿ ಜೂನ್ 01 ನೇ ಸೋಮವಾರ ಕುಂದಾಪುರದ ಹೋಟೆಲ್ ಪಾರಿಜಾತದಲ್ಲಿ ವ್ಯವಸ್ಥೆ ಮಾಡಲಾಗಿದೆ. ಖುದ್ದಾಗಿ ಅಥವಾ ಪ್ರತಿನಿಧಿಗಳ ಮುಖಾಂತರ ರಿನೀವಲ್ ಮಾಡಿಕೊಳ್ಳಬಹುದು. ಮತ್ತು ಹೊಸದಾಗಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವವರು ಒಂದು ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಖುದ್ದಾಗಿ ಬಂದು ಹೆಸರು ನೊಂದಾಯಿಸಿಕೊಳ್ಳತಕ್ಕದ್ದು.
ಈ ಮೇಲಿನ ಎರಡೂ ದಿನಗಳಲ್ಲಿಯೂ ಬರಲು ಅನಾನುಕೂಲವಾದವರು ಜೂನ್ 10ರ ಒಳಗೆ ಟ್ರಸ್ಟ್ ನ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಮಾರ್ಚ್ ತಿಂಗಳಿನಿಂದ ಯಾವುದೇ ಯಕ್ಷಗಾನ, ತಾಳಮದ್ದಳೆಗಳ ಪ್ರದರ್ಶನಗಳು ಇಲ್ಲದೆ ಬೇಸರಗೊಂಡಿರುವ ಯಕ್ಷಾಭಿಮಾನಿಗಳನ್ನು ಸಂತೋಷಪಡಿಸುವ ಸಲುವಾಗಿ, ಮೇ 25 ರಿಂದ 30ರ ವರೆಗೆ ಏಳು ದಿನಗಳ “ಯಕ್ಷಗಾನ -ತಾಳಮದ್ದಳೆ ಸಪ್ತಾಹ”ವನ್ನು ಹಮ್ಮಿಕೊಂಡಿದ್ದು, ಸುಮಾರು ನಲುವತ್ತು ಮಂದಿ ಹೆಸರಾಂತ ಯಕ್ಷ ಕಲಾವಿದರು, ಸುಪ್ರಸಿದ್ಧ ಭಾಗವತರು ಮತ್ತು ಹಿಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ. ಮತ್ತು ಈ ಪ್ರದರ್ಶನಗಳನ್ನು ಫೇಸ್ ಬುಕ್ ಮತ್ತು ಯುಟ್ಯೂಬ್ ನಲ್ಲಿ ನೇರಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಿರುವುದಾಗಿ ತಿಳಿಸಿದರು.
ಮಳೆಗಾಲವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯಕ್ಷಕಲಾವಿದರು ಇನ್ನಷ್ಟು ಸಂಕಷ್ಟಗಳನ್ನು ಎದುರಿಸುವ ಸಂದರ್ಭಗಳಲ್ಲಿ ದಾನಿಗಳ ನೆರವಿನಿಂದ ಇನ್ನುಮುಂದೆಯೂ ಸಹಾಯ ಹಸ್ತ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೆ.ಭಂಡಾರಿ, ಕೋಶಾಧಿಕಾರಿ ಸಿ.ಎ.ಸುದೇಶ್ ರೈಯವರು ಉಪಸ್ಥಿತರಿದ್ದರು.