ಪುತ್ತೂರು ಪೊಲೀಸ್ ಠಾಣೆಯ ಪೋಲೀಸರಿಗೆ ಗಂಟಲು ನೋವು, ಶೀತ, ಜ್ವರ ಬಾಧೆ – ಕಾಣಿಸಿಕೊಂಡಿದೆ ಕೊರೊನಾ ಲಕ್ಷಣಗಳು ; 8 ಮಂದಿ ಪೊಲೀಸರು ಹೋಮ್ ಕ್ವಾರಂಟೈನ್‌ಗೆ – ಕಹಳೆ ನ್ಯೂಸ್
ಪುತ್ತೂರು: ಕೊರೋನಾ ವೈರಸ್ ಕರಿನೆರಳು ಪೊಲೀಸ್ ಇಲಾಖೆಯ ಮೇಲೂ ಬಿದ್ದಾಗಿದೆ. ಆದರೆ ಪುತ್ತೂರು ನಗರ, ಸಂಚಾರ, ಮಹಿಳಾ ಪೊಲೀಸ್ ಠಾಣೆಯ ಸಿಬಂದಿಗಳಿಗೆ ಯಾವುದೇ ಕೊರೋನಾ ಸೋಂಕಿತರ ಸಂಪರ್ಕ ಆಗದಿದ್ದರೂ ಗಡಿ ಪ್ರದೇಶದಲ್ಲಿ ಚೆಕ್‌ಪೋಸ್ಟ್ ಕರ್ತವ್ಯ ನಿರತರಾಗಿದ್ದ ಠಾಣೆಯ ನಾಲ್ವರು ಮತ್ತು ಜ್ವರ ಬಾಧೆಗೆ ಸಂಬಂಧಿಸಿ ಮತ್ತೆ ನಾಲ್ವರು ಸಿಬಂದಿಗಳು ಹೋಮ್ ಕ್ವಾರಂಟೈನ್‌ಗೆ ತೆರಳಿರುವ ಎಂಬ ಮಾಹಿತಿ ಲಭ್ಯವಾಗಿದೆ.
ಠಾಣಾ ವ್ಯಾಪ್ತಿಗೆ ಸಂಬಂಧಿಸಿ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಮ್ ಕ್ವಾರಂಟೈನ್ ಆಗಿರುವ ಮತ್ತು ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಮತ್ತು ಗುಂಡ್ಯ, ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರತರ ಪೊಲೀಸ್ ಸಿಬಂದಿಗಳಿಗೆ ಇಲಾಖೆ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಡುವೆ ಕೆಲವರಿಗೆ ಗಂಟಲು ನೋವು, ಶೀತ, ಜ್ವರ ಬಾಧೆಯಿಂದಾಗಿ ಅವರು ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ಹಾಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಮೂವರು ಸಿಬಂದಿಗಳು ಸೇರಿದಂತೆ ವಿಟ್ಲ ಪೊಲೀಸ್ ವಸತಿ ನಿಲಯದಿಂದ ಪುತ್ತೂರು ಠಾಣೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಸಿಬಂದಿಗೂ ೧೪ ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಜ್ವರ, ಶೀತ ಬಾದೆಗೆ ಸಂಬಂಧಿಸಿ ಇಬ್ಬರು ಮಹಿಳಾ ಪೊಲೀಸರು ಹಾಗೂ ಸಂಚಾರ ಪೊಲೀಸ್ ಠಾಣೆಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಓರ್ವ ಮತ್ತು ಮಡೀಕೇರಿಯ ಸೋಂಕಿತನ ಸಂಪರ್ಕ ಹೊಂದಿದ್ದ ವಿಚಾರಕ್ಕೆ ಓರ್ವನನ್ನು ಸೇರಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಒಟ್ಟು ೮ ಮಂದಿ ಪೊಲೀಸರು ಹೋಮ್ ಕ್ವಾರಂಟೈನ್‌ಗೆ ತೆರಳಿದ್ದಾರೆ.