Sunday, November 24, 2024
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ; ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್ ಆಗ್ರಹ – ಕಹಳೆ ನ್ಯೂಸ್

ಮಂಗಳೂರು : ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಿ ಶಿಸ್ತುಕ್ರಮ ಜರುಗಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಆದೇಶವನ್ನು ನೀಡಿದೆ. ಆದರೆ ಸದರಿ ಪ್ರಕರಣಗಳ ಗಂಭೀರತೆಯನ್ನು ಅರಿತುಕೊಂಡು ಸ್ವತಃ ರಾಜ್ಯ ಸರಕಾರ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಯನ್ನು ನಡೆಸಬೇಕೆಂದು ಸರಕಾರವನ್ನು ಆಗ್ರಹಪಡಿಸುತ್ತೇನೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಲಿಖಿತ ಮನವಿಯನ್ನು ಕೂಡಾ ಸಲ್ಲಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಶ್ರೀ ಹರೀಶ್ ಆಚಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯ ಸರಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯ ಸರಕಾರದ ಲೆಕ್ಕಪರಿಶೊಧನಾ ಇಲಾಖೆಯು ಸಮಗ್ರ ತನಿಖೆಯನ್ನು ನಡೆಸಿ ದಿನಾಂಕ 22.01.2020 ರಂದು ವಿಸ್ತøತ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಆಧಾರಿಸಿ ರಾಜ್ಯ ಸರಕಾರವು ಇಲಾಖಾ ತನಿಖೆಗೆ ಆದೇಶವನ್ನು ನೀಡಿದೆ. ಆದರೆ ಇಲಾಖಾ ತನಿಖೆಯಿಂದ ವರದಿಯಲ್ಲಿ ಕಾಣಿಸಿದ ಪ್ರಕರಣಗಳ ಸಂಪೂರ್ಣ ಸತ್ಯಾಸತ್ಯತೆ ಹೊರಗೆ ಬರಲು ಸಾಧ್ಯವಿಲ್ಲ. ಸ್ವತಂತ್ರ ನ್ಯಾಯಾಂಗ ತನಿಖೆಯಿಂದ ಮಾತ್ರವೇ ಹಲವಾರು ವರ್ಷಗಳಿಂದ ಚರ್ಚೆಗೆ ಕಾರಣವಾಗಿರುವ ಈ ಜಟಿಲ ಪ್ರಕರಣಗಳ ಹಿನ್ನಲೆ ಬೆಳಕಿಗೆ ಬರಲು ಸಾಧ್ಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೆಕ್ಕ ಪರಿಶೋಧನಾ ಇಲಾಖೆಯ ವರದಿಯಲ್ಲಿ ಉಲ್ಲೇಖವಾಗಿರುವ ಏಳು ಪ್ರಕರಣಗಳು 2002ನೆ ಇಸವಿಯಿಂದ ಮೊದಲ್ಗೊಂಡು ಇದೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಜಿಲ್ಲೆಯ ಪ್ರಮುಖ ಮಾಧ್ಯಮಗಳು ಸಾಕಷ್ಟು ಬಾರಿ ವರದಿಯನ್ನು ಮಾಡಿ ಸಾರ್ವಜನಿಕ ಗಮನವನ್ನು ಸೆಳೆದಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಚಟುಟಿಕೆಗಳ ಬಗ್ಗೆ ಅನೇಕ ಸಂಶಯ ಮತ್ತು ಪ್ರಶ್ನೆಗಳಿಗೆ ಎಡೆಮಾಡಿದೆ. ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಹೈಕೋರ್ಟ್ ಆದೇಶದಂತೆ ರದ್ದಾದ ನೇಮಕಾತಿಗಳು ಹಾಗೂ ಹೈಕೋರ್ಟ್ ಆದೇಶದಂತೆ ನೇಮಕಾತಿ ಹೊಂದಿದ ಪ್ರಕರಣಗಳು, ಟೆಂಡರ್ ಕರೆಯದೇ ಪರೀಕ್ಷಾ ನಿರ್ವಹಣೆಯ ಗುತ್ತಿಗೆಯನ್ನು ನೀಡಿರುವುದು ಇತ್ಯಾದಿ ಪ್ರಕರಣಗಳು ಅದರ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಪರೀಕ್ಷಾ ನಿರ್ವಹಣೆಯ ಗುತ್ತಿಗೆಗೆ ಸಂಬಂಧಿಸಿದಂತೆ 2002ರಲ್ಲಿ ನಡೆದ ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ 2018ರಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯಲ್ಲಿ ಕೂಲಂಕೂಷವಾಗಿ ಚರ್ಚಿಸಿ ಸೂಕ್ತ ಕ್ರಮದ ಆದೇಶವನ್ನು ಕೋರಿರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ರಾಜ್ಯ ಸರ್ಕಾರ ವಿಶ್ವವಿದ್ಯಾನಿಲಯ ಮಟ್ಟದಲ್ಲಿಯೇ ಕ್ರಮವಿಡಲು ಸೂಚಿಸಿದೆ. ಆದರೆ ಇದರ ಬಗ್ಗೆ ಇನ್ನೂ ಯಾವುದೇ ಕ್ರಮವಿಡಲಾಗಿಲ್ಲ. 2013ರಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಅನ್ಯಾಯಕ್ಕೆ ಒಳಗಾದ ಶ್ರೀ ಶ್ರೀನಾಥ್, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಮತ್ತು ಶ್ರೀ ಅಜಯ್, ವಾಣಿಜ್ಯ ಶಾಸ್ತ್ರ ವಿಭಾಗ ಇವರು ಹೈಕೋರ್ಟ್‍ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದು, ಅರ್ಜಿದಾರರ ಪರವಾಗಿ ನ್ಯಾಯಾಲಯವು ಸದರಿಯವರನ್ನು ನೇಮಕ ಮಾಡಿಕೊಳ್ಳುವಂತೆ ಹಾಗೂ ಶ್ರೀ ಗೌತಮ್, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಮತ್ತು ಶ್ರೀ ಪ್ರದೀಪ್ ಭಂಡಾರಿ, ವಾಣಿಜ್ಯ ಶಾಸ್ತ್ರ ವಿಭಾಗ ಇವರನ್ನು ಕೆಲಸದಿಂದ ವಜಾಗೊಳಿಸಿ ಆದೇಶಿಸಿದ್ದು ಅದುಜಾರಿಯಾಗಿದೆ. ಇದರಿಂದ ಇಡಿಯ ನೇಮಕಾತಿ ಪ್ರಕ್ರಿಯೆಯ ಸಿಂಧುತ್ವದ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿದ್ದು, ಸಮಗ್ರ ತನಿಖೆಯು ಅಗತ್ಯವಾಗಿದೆ. ಹಾಗೆಯೇ ಪರಿಕ್ಷಾ ನಿರ್ವಹಣೆ ಗುತ್ತಿಗೆಗೆ ಸಂಬಂಧಿಸಿದಂತೆ ಮೆಟಾ-ಐ ಟೆಕ್ನಾಲಜೀಸ್ ಸಂಸ್ಥೆಗೆ ಯಾವುದೇ ಟೆಂಡರನ್ನು ಕರೆಯದೇ ನಿಯಮ ಬಾಹಿರವಾಗಿ 2010ರಲ್ಲಿ ಗುತ್ತಿಗೆಯನ್ನು ನೀಡಲಾಗಿತ್ತು. 2015ರಲ್ಲಿ ಏಟ್ರಿಸ್‍ಟೆಕ್ನಾಲಜೀಸ್ ಸಂಸ್ಥೆಗೆ ಗುತ್ತಿಗೆಯನ್ನು ನೀಡಿದಾಗ ಪರೀಕ್ಷಾಂಗದಲ್ಲಿ ಬಾರೀಗೊಂದಲ ಉಂಟಾಗಿತ್ತು. ಆದುದರಿಂದ ಪರೀಕ್ಷಾಂಗದ ಪ್ರಮುಖ ವಿಭಾಗದಲ್ಲಿ ಈ ರೀತಿಯ ಅವ್ಯವಸ್ಥೆಗೆ ಕಾರಣರಾದವರ ಬಗ್ಗೆ ಸೂಕ್ತ ತನಿಖೆಯ ಅವಶ್ಯಕತೆ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೆಕ್ಕಪರಿಶೋಧನಾ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಅನೇಕರು ಇಂದು ಆಡಳಿತಾಂಗ ಉನ್ನತ ಹುದ್ದೆಗಳಲ್ಲಿ ಇದ್ದಾರೆ. 2002 ಮತ್ತು 2013ರ ನೇಮಕಾತಿಯನ್ವಯ ನೇಮಕಗೊಂಡಿರುವ ಹಲವಾರು ವ್ಯಕ್ತಿಗಳು ವಿಶ್ವವಿದ್ಯಾನಿಲಯದ ಬೇರೆ ಬೇರೆ ಆಡಳಿತಾಂಗದ ಹುದ್ದೆಗಳಲ್ಲಿದ್ದು ಅವರುಗಳು ಆಡಳಿತದಲ್ಲಿ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಅವರಿಂದಲೇ ಇಲಾಖಾ ತನಿಖೆಯನ್ನು ಮಾಡಿಸುವುದು ಸಮಂಜಸವಲ್ಲ. ಮತ್ತು ಇದು ಹಾಸ್ಯಾಸ್ಪದ ಕೂಡಾ. ಇದರಿಂದ ಸಂಪೂರ್ಣ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ.

ಲೆಕ್ಕಪರಿಶೋಧನಾ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಪರೀಕ್ಷಾ ಕಾರ್ಯನಿರ್ವಹಣೆಯ ಗುತ್ತಿಗೆಗೆ ಸಂಬಂಧಿಸಿದಂತೆ 2010ರಲ್ಲಿ ಮೆಟಾ-ಐ ಟೆಕ್ನಾಲಜೀಸ್ ಸಂಸ್ಥೆಗೆ ಟೆಂಡರ್ ಕರೆಯದೇ ಗುತ್ತಿಗೆ ನೀಡಿದ ಸಂದರ್ಭದಲ್ಲಿ ಉಪ ಕುಲಪತಿಗಳಾಗಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ, ಕುಲಸಚಿವರಾಗಿ ಪ್ರೊ.ಚಿನ್ನಪ್ಪಗೌಡ, ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಪಿ.ಎಸ್. ಎಡಪಡಿತ್ತಾಯರವರು ಕರ್ತವ್ಯದಲ್ಲಿದ್ದರು. ಹಾಗೆಯೇ 2015ರಲ್ಲಿ ಏಟ್ರಿಸ್‍ಟೆಕ್ನಾಲಜೀಸ್ ಸಂಸ್ಥೆಗೆ ಗುತ್ತಿಗೆಯನ್ನು ನೀಡಿದಾದ ಕುಲಪತಿಗಳಾಗಿ ಪ್ರೊ. ಕೆ.ಬೈರಪ್ಪ, ಕುಲಸಚಿವರಾಗಿ ಪ್ರೊ.ಪಿ.ಎಸ್. ಎಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವರಾಗಿ ಪ್ರೊ. ಬಿ. ನಾರಾಯಣ್ ಕರ್ತವ್ಯದಲ್ಲಿದ್ದರು. ಹಾಗೆಯೇ ವರದಿಯಲ್ಲಿ ಉಲ್ಲೇಖಿಸಲಾದ ಗಣಕಯಂತ್ರ ಮತ್ತು ಲ್ಯಾಪ್‍ಟಾಪ್ ಖರೀದಿ ಪ್ರಕ್ರಿಯೆಯ ಪ್ರಕರಣಕ್ಕೆ ಸಂಬಂಧಿಸಿ ಉಪಕುಲಪತಿಗಳಾಗಿ ಪ್ರೊ. ಕೆ.ಬೈರಪ್ಪ, ಕುಲಸಚಿವರಾಗಿ ಪ್ರೊ.ಪಿ.ಎಸ್. ಎಡಪಡಿತ್ತಾಯ ಕರ್ತವ್ಯದಲ್ಲಿದ್ದರು. 2013ರಲ್ಲಿ ನಡೆದ ಭೋದಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಉಪಕುಲಪತಿಗಳಾಗಿ ಪ್ರೊ.ಟಿ.ಸಿ. ಶಿವಶಂಕರ್ ಮೂರ್ತಿ, ಕುಲಸಚಿವರಾಗಿ ಪ್ರೊ.ಪಿ.ಎಸ್. ಎಡಪಡಿತ್ತಾಯ ಕರ್ತವ್ಯದಲ್ಲಿದ್ದರು. ಮತ್ತು ಓಪನ್ ಹೌಸ್ ಕಾರ್ಯಕ್ರಮದ ಆಯೋಜನೆಯ ಸಂದರ್ಭದಲ್ಲಿ ಪ್ರೊ.ಕೆ.ಬೈರಪ್ಪ ಉಪಕುಲಪತಿಗಳಾಗಿ ಮತ್ತು ಪ್ರೊ.ಪಿ.ಎಸ್. ಎಡಪಡಿತ್ತಾಯ ಕುಲಸಚಿವರಾಗಿ ಕರ್ತವ್ಯದಲ್ಲಿದ್ದರು.

ಸದರಿರಾಜ್ಯ ಸರ್ಕಾರದ ಆದೇಶದಂತೆ ಇಲಾಖಾ ತನಿಖೆಯನ್ನು ನಡೆಸ ಬೇಕಾಗದ ಉನ್ನತ ಅಧಿಕಾರಿಗಳೇ ಸ್ವತಃ ಬೇರೆ ಬೇರೆ ಪ್ರಕರಣದಲ್ಲಿ ಭಾಗೀದಾರ ಸ್ಥಾನದಲ್ಲಿದ್ದಾರೆ. ಉಪ ಕುಲಪತಿಗಳಾದ ಪ್ರೊ.ಪಿ.ಎಸ್. ಎಡಪಡಿತ್ತಾಯ, ಹಣಕಾಸು ಅಧಿಕಾರಿಗಳಾದ ಪ್ರೊ. ಬಿ. ನಾರಾಯಣ ಸೇರಿದಂತೆ ಅನೇಕ ಮಂದಿ ವರದಿಯಲ್ಲಿನ ಪ್ರಕರಣಗಳಿಗೆ ಸಂಬಂಧಿಸಿ ಭಾಗೀದಾರಿಗಳಾಗಿದ್ದು ಆಡಳಿತಾಂಗದ ಬೇರೆ ಬೇರೆ ಪ್ರಮುಖ ಆಯಕಟ್ಟಿನ ಜಾಗದಲ್ಲಿ ಕರ್ತವ್ಯದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಅಡಿಯಲ್ಲಿಯೇ ಈ ಇಲಾಖಾ ತನಿಖೆಯನ್ನು ಕೈಗೊಳ್ಳುವುದು ಸಮಂಜಸವಲ್ಲ. ಇದರಿಂದ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರ ಬರುವುದು ಸಾಧ್ಯವಿಲ್ಲ. ಆದುದರಿಂದರಾಜ್ಯ ಸರ್ಕಾರ ಸ್ವತಃ ಈ ಪ್ರಕರಣದಲ್ಲಿ ವಿಶೇಷ ಮುತುವರ್ಜಿಯನ್ನು ವಹಿಸಿ ನ್ಯಾಯಾಂಗತನಿಖೆಯನ್ನು ಕೈಗೊಳ್ಳಲು ಆದೇಶಿಸಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ. ಹಾಗೂ ರಾಜ್ಯ ಸರ್ಕಾರವು ತಕ್ಷಣವೇ ನೋಡೆಲ್ ಅಧಿಕಾರಿ ಇವರನ್ನು ನೇಮಿಸಿ ಈ ಪ್ರಕರಣಗಳಿಗೆ ಸಂಬಂಧಪಟ್ಟ ಎಲ್ಲಾ ಕಡತಗಳನ್ನು ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.