ಮಥುರಾದ ವೃಂದಾವನದಲ್ಲಿ ಈತ ರಾಧಾಕೃಷ್ಣನ ಪರಮ ಭಕ್ತನಾಗಿ ಗುರುತಿಸಿ ಕೊಂಡಿದ್ದನು. ಅವನು ವಾಸಿಸುತ್ತಿದ್ದ ಕೋಣೆಯ ಗೋಡೆಗಳಲ್ಲಿ ರಾಧೆಯ ಮತ್ತು ಶ್ರೀಕೃಷ್ಣನ ಫೋಟೋಗಳೇ ರರಾಜಿಸುತ್ತಿದ್ದವು. ವೃಂದಾವನದಲ್ಲಿ ನಡೆಯುವ ವಿಶೇಷ ಭಜನೆ ಮತ್ತು ಪಾರಾಯಣಗಳ ಸಂದರ್ಭದಲ್ಲಿ ಮುಂದಿನ ಪಂಕ್ತಿಯಲ್ಲೇ ಕಾಣಿಸಿಕೊಳ್ಳುತ್ತಿದ್ದನು. ಇಂತಹ ವ್ಯಕ್ತಿಯೊಬ್ಬರು ಅಪರಾಧ ಎಸೆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಪ್ರತಿಯೊಬ್ಬರೂ ಕೂಡ ಆಶ್ಚರ್ಯಚಕಿತರಾಗಿದ್ದರು. ಏಕೆಂದರೆ ಇವನು ಆಡಿದ ಪ್ರೀತಿ ಪ್ರೇಮದ ನಾಟಕವನ್ನು ಇಡೀ ಊರವರು ನಂಬಿದ್ದರು. ಈ ವ್ಯಕ್ತಿ ಒಬ್ಬರನ್ನು ಕೊಲ್ಲಲು ಪ್ರಯತ್ನಿಸಿರುವುದರ ಹಿಂದಿನ ಅಸಲಿ ಸತ್ಯವನ್ನು ಪೊಲೀಸರು ಜಗತ್ತಿನ ಮುಂದಿಟ್ಟಿದ್ದರು. ಯಾರೀತ? ಯಾಕಾಗಿ ಭಾರತಕ್ಕೆ ಬಂದಿದ್ದ?
ಇದೊಂದು ಅಪ್ಪಟ ಲವ್ ಸೆಕ್ಸ್ ದೋಖಾ ಕಹಾನಿ. 2017 ರಲ್ಲಿ ನಡೆದ ಈ ನೈಜಕಥೆಯಲ್ಲಿ ನಾಯಕನೇ ವಿಲನ್. ಈ ಕಥೆಯ ನಾಯಕಿ ದೆಹಲಿ ಮೂಲದ ಅಂಜಲಿ ಫೇಸ್ಬುಕ್ನಲ್ಲಿ ತುಂಬಾ ಸಕ್ರೀಯಳಾಗಿದ್ದಳು. ಹೊಸ ಫ್ರೆಂಡ್ಸ್ಗಳನ್ನು ಸಂಪಾದಿಸುವುದೇ ಅವಳ ಅಭ್ಯಾಸಗಳಲ್ಲಿ ಒಂದಾಗಿತ್ತು. ಈ ರೀತಿ ಇರುವಾಗ ಅದೊಂದು ದಿನ ಅಂಜಲಿಗೆ ಮೈಕೆಲ್ ಎಂಬವರ ಫೇಸ್ಬುಕ್ ಖಾತೆ ಕಾಣಿಸಿದೆ. ಪ್ರೊಫೈಲ್ ಪರಿಶೀಲಿಸಿದಾಗ ಒಂದಷ್ಟು ಆಸಕ್ತಿಕರ ವಿಷಯಗಳಿದ್ದವು. ಅಮೆರಿಕದ ಮೇರಿಲ್ಯಾಂಡ್ನಲ್ಲಿದ್ದರೂ ಮೈಕೆಲ್ ಹಿಂದೂ ಧರ್ಮದ ಕಡೆ ಆಕರ್ಷಿತನಾಗಿದ್ದನು.
ಅಂಜಲಿಗೆ ಇಷ್ಟೇ ಸಾಕಾಗಿತ್ತು. ಮೈಕೆಲ್ ಎಂಬ ವ್ಯಕ್ತಿಯೊಂದಿಗೆ ಫ್ರೆಂಡ್ಶಿಪ್ ಬೆಳೆಸಿದ್ದಳು. ಸಾಮಾಜಿಕ ಜಾಲತಾಣದ ಗೆಳೆತನ ಚಾಟಿಂಗ್ ಕಡೆ ಹೊರಳಿತು. ದಿನ ಕಳೆದಂತೆ ಸ್ನೇಹ ಸಂಬಂಧ ಹತ್ತಿರವಾಯಿತು. ತಾನು ಆಗಿಂದಾಗೆ ಭಾರತಕ್ಕೆ ಭೇಟಿ ಕೊಡುತ್ತಿರುತ್ತೀನಿ. ಶ್ರೀಕೃಷ್ಣನ ಭಕ್ತನಾಗಿರುವುದರಿಂದ ವೃಂದಾವನದಲ್ಲಿ ನೆಲೆಸುವುದಾಗಿ ಮೈಕೆಲ್ ತಿಳಿಸಿದನು. ಇದರ ಹಿಂದಿನ ಉದ್ದೇಶ ಮುಂದಿನ ಬಾರಿ ಭಾರತಕ್ಕೆ ಬಂದಾಗ ಅಂಜಲಿಯನ್ನು ಭೇಟಿಯಾಗುವುದಾಗಿತ್ತು. ಅದರಂತೆ ಭಾರತಕ್ಕೆ ಆಗಮಿಸಿದ ಮೈಕೆಲ್, ಅಂಜಲಿಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದನು. ತುಂಬಾ ದಿನದ ಪರಿಚಯವಾಗಿದ್ದರಿಂದ ಅಂಜಲಿ ಕೂಡ ಮೈಕೆಲ್ ಭೇಟಿಗೆ ಒಪ್ಪಿಕೊಂಡಳು.
ಅಮೆರಿಕನ್ ಮತ್ತು ಶ್ರೀಮಂತಿಕೆ
ಅಮೆರಿಕದಿಂದ ಬರುತ್ತಿದ್ದ ವ್ಯಕ್ತಿಯಾಗಿದ್ದರಿಂದ ಮೊದಲೇ ಅಂಜಲಿಗೆ ಹಲವು ರೀತಿಯ ಕಲ್ಪನೆಗಳಿದ್ದವು. ಅದೆಲ್ಲವೂ ಸತ್ಯವೆಂಬಂತೆ ಮೈಕೆಲ್ ತನ್ನ ಶ್ರೀಮಂತಿಕೆ, ಉತ್ಸಾಹ ಮತ್ತು ಧಾರ್ಮಿಕ ಪಾಂಡಿತ್ಯವನ್ನು ಅಂಜಲಿ ಎದುರು ಪ್ರಸ್ತುತಪಡಿಸಿದ್ದನು. 25ರ ಹರೆಯದ ಅಂಜಲಿಗೆ ಫಿದಾ ಆಗಿಬಿಟ್ಟಿದ್ದಳು. ಮೊದಲ ಭೇಟಿಯಲ್ಲೇ ಪ್ರೀತಿಯ ಭಾವನೆಗಳು ಮೊಳಕೆ ಹೊಡೆದಿತ್ತು. ಮೈಕೆಲ್ಗೆ 50 ವರ್ಷವಾಗಿದ್ದರೂ, ಅಂಜಲಿಗೆ ಪ್ರಾಯ ಎಂಬುದು ಕೇವಲ ಒಂದು ನಂಬರ್ ಆಗ್ಬಿಡ್ತು. ಮೈಕೆಲ್ ಪ್ರತಿ ಬಾರಿಯು ಭಾರತಕ್ಕೆ ಭೇಟಿ ನೀಡಿದಾಗಲೂ ಅಂಜಲಿಯೊಂದಿಗೆ ಕಾಲಕಳೆಯುತ್ತಿದ್ದನು. ಪ್ರೇಮ ಸಂಕೇತವಾದ ತಾಜ್ ಮಹಲ್ ಇವರಿಬ್ಬರ ಆಕರ್ಷಣೆಯ ಕೇಂದ್ರ. ಬೆಳಿಗ್ಗೆಯಿಂದ ಹಾದಿ ಬೀದಿ ಸುತ್ತಾಡುತ್ತಿದ್ದ ಈ ಜೋಡಿಗಳು ಸಂಜೆಯಾಗುತ್ತಿದ್ದಂತೆ ವೃಂದಾವನದತ್ತ ಪ್ರತ್ಯಕ್ಷರಾಗುತ್ತಿದ್ದರು. ಏಕೆಂದರೆ ಮೈಕೆಲ್ ವೃಂದಾವನದ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜೋಡಿ ಜೊತೆಗೂಡುತ್ತಿದ್ದರು. ಮೈಕೆಲ್ಗೆ ಭಾರತದಲ್ಲಿ ಹೊಸ ಪರಿಚಯ ವಾಗಿದ್ದರಿಮದ ಅಂಜಲಿಯ ಸಾಥ್ ಅಪಾರ ಇಷ್ಟಪಟ್ಟಿದ್ದನು. ಅಂಜಲಿಗೂ ಮೊದಲ ಭೇಟಿಯಲ್ಲೇ ಮೂಡಿದ ಪ್ರೇಮ ಹೃದಯದಲ್ಲೇ ಬೆಚ್ಚಗಾಗಿ ಅಡಗಿತ್ತು. ಇದುವೇ ಇವರಿಬ್ಬರನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುವಂತೆ ಮಾಡಿದೆ. ಹೀಗಾಗಿಯೇ ಇಬ್ಬರೂ ಒಂದೇ ಕೋಣೆಯಲ್ಲಿ ಉಳಿಯುವ ತೀರ್ಮಾನಕ್ಕೆ ಬಂದಿದ್ದರು. ಮೈಕೆಲ್ ಮತ್ತು ಅಂಜಲಿ ನಡುವೆ ದೈಹಿಕ ಸಂಬಂಧ ಕೂಡ ಗಟ್ಟಿಯಾಗುತ್ತಾ ಹೋಯಿತು.
ಮೈಕೆಲ್ ಭಾರತಕ್ಕೆ ಬಂದು ಹೋಗುವುದು ಮುಂದುವರೆದಿತ್ತು. ಪ್ರತಿ ಭೇಟಿಯ ವೇಳೆ ತಾನು ನಿನ್ನನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗುವುದಾಗಿ ಮೈಕೆಲ್ಗೆ ಹೇಳುತ್ತಿದ್ದನು. ಅಂಜಲಿ ಕೂಡ ವಿದೇಶದಲ್ಲಿ ನೆಲೆ ಕಂಡುಕೊಳ್ಳುವ ಕನಸುಗಳನ್ನು ಕಾಣುತ್ತಿದ್ದಳು. ಆದರೆ ಮೈಕೆಲ್ ಒಂದೊಂದು ಕಾರಣ ನೀಡಿ ಅಂಜಲಿಯನ್ನು ಯುಎಸ್ಗೆ ಕರೆಸಿಕೊಳ್ಳುವ ಪ್ಲಾನ್ನ್ನು ಮುಂದೂಡುತ್ತಿದ್ದ. ಆದರೆ ಭಾರತಕ್ಕೆ ಭೇಟಿ ನೀಡಿದ ವೇಳೆ ಅವನು ತೋರಿಸುತ್ತಿದ್ದ ಪ್ರೀತಿಯನ್ನು ಅಂಜಲಿ ಸಂಪೂರ್ಣ ನಂಬಿದ್ದಳು. ಇದರಿಂದ ಸಂಬಂಧ ಕೂಡ ಗಟ್ಟಿಗೊಳ್ಳುತ್ತಾ ಹೋಗಿತ್ತು.ತಾಯ್ತನದ ಖುಷಿ
ಅದೊಂದು ದಿನ ವೈದ್ಯರ ಭೇಟಿಯ ವೇಳೆ ಅಂಜಲಿಗೆ ತಾನು ತಾಯಿಯಾಗುತ್ತಿರುವ ವಿಷಯ ತಿಳಿಯಿತು. ಆದರೆ ಈ ವಿಷಯವನ್ನು ಮೈಕೆಲ್ಗೆ ಫೋನಿನ ಅಥವಾ ಮೆಸೇಜ್ ಮೂಲಕ ತಿಳಿಸುವುದು ಬೇಡ. ಮೈಕೆಲ್ ಭಾರತಕ್ಕೆ ಭೇಟಿ ನೀಡಿದಾಗ ನೇರವಾಗಿ ಹೇಳೋಣ. ಆಗ ಮತ್ತಷ್ಟು ಖುಷಿಗೊಳ್ಳುತ್ತಾನೆ ಎಂದು ಅಂಜಲಿ ಊಹಿಸಿದ್ದಳು. ಅದರಂತೆ ಅಕ್ಟೋಬರ್ 4 ರಂದು ಮೈಕೆಲ್ ಭಾರತಕ್ಕೆ ಭೇಟಿ ನೀಡಿದ್ದಾನೆ. ಎಂದಿನಂತೆ ವೃಂದಾವನದ ಶ್ರೀಕೃಷ್ಣ ಸರನಮ್ ಸೊಸೈಟಿಯಲ್ಲಿ ನೆಲೆಸಿದ್ದರು. ಮೊದಲೇ ತಿಳಿಸಿದಂತೆ ಮೈಕೆಲ್ನನ್ನು ಭೇಟಿಯಾಗಲು ಅಂಜಲಿ ವೃಂದಾವನಕ್ಕೆ ತೆರೆಳಿದ್ದಳು. ಅಂಜಲಿ ಏನೋ ವಿಷಯ ಹೇಳಲು ಮೈಕೆಲ್ ಪಕ್ಕಕ್ಕೆ ಹೋಗುತ್ತಿದ್ದಂತೆ ತನ್ನ ಬಾಹುವಿನಲ್ಲಿ ಅಂಜಲಿಯನ್ನು ಸೆಳೆದು ರೋಮ್ಯಾನ್ಸ್ ಮೂಡಿಗೆ ಜಾರಿದ್ದನು.
ಸ್ವಲ್ಪ ಹೊತ್ತಿನ ಬಳಿಕ ಅಂಜಲಿಯು ತಾನು ತಾಯಿಯಾಗುತ್ತಿರುವುದಾಗಿ ಮೈಕೆಲ್ಗೆ ತಿಳಿಸಿದಳು. ತನ್ನ ಇನಿಯ ಮುಖದಲ್ಲಿ ಸಂತೋಷವನ್ನು ಬಯಸಿದ್ದ ಅಂಜಲಿಗೆ ಕಾಣಿಸಿದ್ದು ಮಾತ್ರ ಆಘಾತದ ಪ್ರತಿರೂಪ. ಈ ಮಾತುಗಳನ್ನು ಕೇಳಿದ ಕೂಡಲೇ ಅಸಮಾಧಾನಗೊಂಡ ಮೈಕೆಲ್, ಗರ್ಭಪಾತದ ಮಾತುಗಳನ್ನಾಡಿದ್ದನು. ಆದರೆ ಇಂತಹದೊಂದು ಪ್ರತ್ಯುತ್ತರ ಮಾತ್ರ ಅಂಜಲಿ ನಿರೀಕ್ಷಿಸಿರಲಿಲ್ಲ. ನಾವಿಬ್ಬರು ಮದುವೆ ಆಗೋಣ. ಯಾಕಾಗಿ ಅಬಾರ್ಷನ್ ಎಂದು ಮರು ಪ್ರಶ್ನಿಸಿದಳು.
ಆದರೆ ಇದನ್ನು ಒಪ್ಪಿಕೊಳ್ಳಲು ಮೈಕೆಲ್ ಸುತಾರಂ ತಯಾರಿರಲಿಲ್ಲ. ಈ ವಿಷಯದ ಕುರಿತು ಇಬ್ಬರೂ ಚರ್ಚೆ ನಡೆಸಿದರು. ಕೆಲವು ದಿನಗಳು ಜೊತೆಯಾಗಿದ್ದ ಅಂಜಲಿ ವಿವಾಹವಾಗಲು ಮೈಕೆಲ್ನ್ನು ಒತ್ತಾಯಿಸಿದರು. ಇದರಿಂದ ಇಬ್ಬರ ನಡುವೆ ವೈಮನಸ್ಸು ಮೂಡಿತು. ಆದರೂ ಅಂಜಲಿಯೊಂದಿಗೆ ಒತ್ತಾಯ ಪೂರಕ ಲೈಂಗಿಕ ಬಂಧವನ್ನು ಮೈಕೆಲ್ ಮುಂದುವರೆಸಿದ್ದನು. ಒಂದು ವಾರಗಳ ಕಾಲ ಸಮಯ ನೀಡಿದ ಅಂಜಲಿ ತನ್ನ ನಿಲುವನ್ನು ಸ್ಪಷ್ಟಪಡಿಸಲು ನಿರ್ಧರಿಸಿದಳು…
ಅಂಜಲಿ: ನೀವು ಮದುವೆಯಾಗುತ್ತೀರಿ ಎಂದು ಹೇಳಿದ್ರಿ. ಹೀಗಾಗಿಯೇ ನಾನು ದೈಹಿಕ ಸಂಬಂಧಕ್ಕೆ ಒಪ್ಪಿಕೊಂಡೆ. ಈಗ ಮೋಸ ಮಾಡಲು ನಾನು ಬಿಡುವುದಿಲ್ಲ.
ಮೈಕೆಲ್: ಗೊ ಟು ಹೆಲ್.. ನಾನು ಮದುವೆಯಾಗುವುದಿಲ್ಲ. ನೀನು ಏನು ಬೇಕಾದರೂ ಮಾಡ್ಕೋ.
ಅಂಜಲಿ: ಸರಿ, ಈಗ ಪೊಲೀಸರು ನಿಮ್ಮೊಂದಿಗೆ ಮಾತನಾಡುತ್ತಾರೆ. ನಾನು ನಿಮ್ಮೊಂದಿಗೆ ಮಾತನಾಡಲು ಏನೂ ಉಳಿದಿಲ್ಲ.
ಮೈಕೆಲ್: ಯು…ಬ್ಲಡಿ, ಎಷ್ಟೊಂದು ಹಣ ನೀಡಿದ್ದೇನೆ, ತುಂಬಾ ಸಮಯವನ್ನು ವ್ಯಯಿಸಿದ್ದೇನೆ, ಇಷ್ಟು ಸಾಕಾಗಿಲ್ಲವೇ? ಇದಾ ತಗೋ ಹಣ.. ಡಾಲರ್.
ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಅಂಜಲಿ ದೂರು ದಾಖಲಿಸುವುದಾಗಿ ಹೇಳಿದ ಮಾತಿಂದ ಕೋಪಗೊಂಡ ಮೈಕೆಲ್ ಅಂಜಲಿಯನ್ನು ಬೆದರಿಸಲು ಪ್ರಯತ್ನಸಿದ. ಜಗಳ ಹೆಚ್ಚಾಗುತ್ತಿದ್ದಂತೆ ಕೋಣೆಯಿಂದ ಹೊರ ಬರಲು ಪ್ರಯತ್ನಿಸಿದ ಅಂಜಲಿಯನ್ನು ಮೈಕೆಲ್ ತಡೆದ. ಎಲ್ಲಿಗೆ ಹೋಗುತ್ತಿರುವೆ ಎಂದು ಹತ್ತಿರದಲ್ಲೇ ಇದ್ದ ಚಾಕುವಿನಿಂದ ಹತ್ಯೆಗೈಯ್ಯಲು ಪ್ರಯತ್ನಿಸಿದ. ಅದೇಗೋ ತಪ್ಪಿಸಿಕೊಂಡ ಅಂಜಲಿ ಸೀದಾ ಠಾಣೆಗೆ ಬಂದು ತಲುಪಿದ್ದಳು.
ಮೊದಲೇ ಭಯಭೀತಗೊಂಡಿದ್ದ ಅಂಜಲಿಯನ್ನು ವಿಚಾರಿಸಿದ ಪೊಲೀಸರು ನೇರವಾಗಿ ಮೈಕೆಲ್ ಉಳಿದುಕೊಂಡಿರುವ ರೂಮ್ನತ್ತ ತೆರಳಿದರು. ಪೊಲೀಸರನ್ನು ಕಾಣುತ್ತಿದ್ದಂತೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ ಮೈಕೆಲ್, ‘ಶೂಟ್ ಮಿ, ಐ ಡೋಂಟ್ ಕೇರ್ ..’ ಎಂದು ಚಾಕುವಿನಿಂದ ಪೊಲೀಸರು ಮೇಲೆ ದಾಳಿಗೆ ಮುಂದಾದನು. ಕೆಲ ಹೊತ್ತು ನಡೆದ ಈ ನಾಟಕೀಯ ಬೆಳವಣಿಗೆಯ ನಡುವೆ ಮೈಕೆಲ್ನನ್ನು ಬಂಧಿಸಲು ಪೊಲೀಸರು ಯಶಸ್ವಿಯಾದರು. ಇದೇ ವೇಳೆ ವ್ಯಕ್ತಿಯೊಬ್ಬರು ಮೈಕೆಲ್ನ ರೌದ್ರವತಾರದ ವಿಡಿಯೋವನ್ನು ಸೆರೆ ಹಿಡಿದಿದ್ದರು. ಸಾಕ್ಷಿಗಾಗಿ ಪೊಲೀಸರು ಈ ವಿಡಿಯೋವನ್ನು ವಶಕ್ಕೆ ತೆಗೆದುಕೊಂಡರು.
ಮೈಕೆಲ್ನನ್ನು ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ವೀಸಾ ಅವಧಿ ಮುಗಿದಿರುವುದು ಬೆಳಕಿಗೆ ಬಂತು. ಅಂಜಲಿ ದೂರಿನ್ವಯ ಅತ್ಯಾಚಾರ, ಕೊಲೆ ಯತ್ನ ಹಾಗೂ ಅಕ್ರಮ ವಾಸ, ಸರ್ಕಾರಿ ಕೆಲಸದ ಅಡಚಣೆ, ಪೊಲೀಸರ ಮೇಲೆ ಆಕ್ರಮಣ ಸೇರಿದಂತೆ ವಿದೇಶಿ ಕಾಯ್ದೆ 14 ನೇ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಯಿತು. ನಂತರ ನಡೆದ ವಿಚಾರಣೆ ವೇಳೆ ತಾನು ಅಂಜಲಿಯನ್ನು ಕೇವಲ ಲೈಂಗಿಕ ಸುಖಕ್ಕಾಗಿ ಬಳಸಲು ಬಯಸಿರುವುದಾಗಿ ಮೈಕೆಲ್ ಬಾಯಿಬಿಟ್ಟಿದ್ದನು. ಇದಕ್ಕಾಗಿಯೇ ತಾನು ಸೋಷಿಯಲ್ ಮೀಡಿಯಾ ಮೂಲಕ ಅಂಜಲಿಯನ್ನು ಆಕರ್ಷಿಸಿದ್ದೆ ಎಂಬ ಆಘಾತಕಾರಿ ವಿಷಯವನ್ನು ಮೈಕೆಲ್ ಹಂಚಿಕೊಂಡಿದ್ದರು.