ಬೆಂಗಳೂರಿಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಬೈಕ್, ಕೆರೆಯಂತಾದ ರಸ್ತೆಗಳು ; ಅಯ್ಯೋ ಬೆಂಗಳೂರೇ…! – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಫೋಟದ ನಡುವೆ ರೋಹಿಣಿ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ.
ಬೆಂಗಳೂರಿನಲ್ಲಿ ಸತತ ನಾಲ್ಕನೇ ದಿನವೂ ಸಂಜೆ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ವಾಯು ಮತ್ತು ವರುಣದೇವನ ಅಬ್ಬರಕ್ಕೆ ನಗರದ ಹಲವೆಡೆ 40ಕ್ಕೂ ಹೆಚ್ಚು ಮರಗಳು ಉರುಳಿದ್ದು, ಹಲವು ವಾಹನ ಜಖಂ ಆಗಿದೆ. ಕೆಆರ್ ವೃತ್ತದಲ್ಲಿ ಚಲಿಸುವ ಕಾರಿನ ಮೇಲೆ ಮರ ಬಿದ್ದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಮಲ್ಲೇಶ್ವರಂನಲ್ಲಿ ಕಟ್ಟವೊಂದಕ್ಕೆ ಹಾನಿಯಾಗಿದ್ದು, ಕಾರೊಂದು ಸಂಪೂರ್ಣವಾಗಿ ಹಾನಿಗೊಂಡಿದೆ.
ವರುಣನ ಅಬ್ಬರಕ್ಕೆ ಬೆಂಗಳೂರು ಥಂಡಾ ಹೊಡೆದಿದ್ದು, ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡಿದರು. ಬಹುತೇಕ ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲದಲ್ಲಿ ಬೈಕೊಂದು ಕೊಚ್ಚಿ ಹೋಗಿದೆ. ಹೆಬ್ಬಾಳ ಬಳಿ ಲುಂಬಿಣಿ ಗಾರ್ಡನ್, ಆನಂದರಾವ್ ಸರ್ಕಲ್ ಸಂದ್ಯಾ ಲಾಡ್ಜ್, ವಿಧಾನ ಸೌಧ, ವಿದ್ಯಾರಣ್ಯಪುರ, ಕಾವೇರಿ ಜಂಕ್ಷನ್ ಸೇರಿದಂತೆ ರಾಜಾಜಿನಗರ ಬಳಿ ರಸ್ತೆಯುದ್ದಕ್ಕೂ ಮರಗಳು ರಸ್ತೆಗೆ ಉರುಳಿ ಬಿದಿದ್ದವು. ಪರಿಣಾಮ ಇಂದು ಸಂಜೆ ವೇಳೆಗೆ ಬಿಬಿಎಂಪಿ ಕಂಟ್ರೋಲ್ ರೂಂಗೆ ಸುಮಾರು 35ಕ್ಕೂ ಹೆಚ್ಚಾಗಿ ಮರ ಉರುಳಿ ಬಿದ್ದಿರುವ ಬಗ್ಗೆ ಕರೆಗಳು ಬಂದಿದೆ. ಇತ್ತ ಹಲವು ಸ್ಥಳಗಳಲ್ಲಿ ರಸ್ತೆಗುರುಳಿದ್ದ ಮರದ ಕೊಂಬೆಗಳನ್ನು ಸ್ಥಳೀಯರೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಬಿಬಿಎಂಪಿ ಸಿಬ್ಬಂದಿಗಳು ಕೂಡ ಹಲವು ಭಾಗಗಳಲ್ಲಿ ರಸ್ತೆಗುರುಳಿ ಬಿದಿದ್ದ ಮರಗಳನ್ನು ತೆರವುಗೊಳಿಸಿದರು.
ಇತ್ತ ಕೋಲಾರದಲ್ಲೂ ಬಿರುಗಾಳಿ ಸಹಿತ ಮಳೆಗೆ ಹಲವು ಮನೆಗಳು ಕುಸಿದಿದ್ದೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕನುಮನಹಳ್ಳಿ ಚೆಕ್‍ಪೋಸ್ಟ್ ಗೆ ಹಾನಿಯಾಗಿದೆ. ಹತ್ತಾರು ಎಕರೆ ಬಾಳೆ ಬೆಳೆ ನೆಲಕಚ್ಚಿದೆ.