ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ಪಾದರಾಯನಪುರದ ಜನರು ಈಗ ಮತ್ತೆ ಗಲಾಟೆ ನಡೆಸಿದ್ದಾರೆ.
ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ಪಾದರಾಯನಪುರದ ಜನರು ಈಗ ಮತ್ತೆ ಗಲಾಟೆ ನಡೆಸಿದ್ದಾರೆ.
ವೈದ್ಯಾಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಗುರುವಾರ ಪಾದರಾಯನಪುರದಲ್ಲಿ ಸರ್ವೇ ನಡೆಸಿದ್ದರು. ಬಳಿಕ ಸಭೆ ನಡೆಸಿ ಕೊರೊನಾ ಸೋಂಕಿತರು ಇಲ್ಲದ ಕಡೆ ಸೀಲ್‍ಡೌನ್ ತೆರೆಯಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಹೆಚ್ಚಿನ ಸೋಂಕಿತರು ಪತ್ತೆಯಾದ 11 ಮತ್ತು 16ನೇ ಕ್ರಾಸ್‍ನ ಸೀಲ್‍ಡೌನ್ ತೆರೆಯದಂತೆ ಪೊಲೀಸರಿಗೆ ಸೂಚನೆ ನೀಡಲಾಗಿತ್ತು.
ಅಧಿಕಾರಿಗಳ ಸೂಚನೆಯಂತೆ ಪೊಲೀಸರು ಸೀಲ್‍ಡೌನ್ ತೆರೆಯಲು ಮುಂದಾಗಿದ್ದರು. ಈ ವೇಳೆ 11ನೇ ಕ್ರಾಸ್‍ನ ಮಹಿಳೆಯರು “ಆ ರಸ್ತೆ ಯಾಕೆ ಫ್ರೀ ಮಾಡ್ತೀರಾ. ನಮ್ಮ ರಸ್ತೆಯನ್ನು ಫ್ರೀ ಮಾಡಿ. ಕಂಟೈನ್‍ಮೆಂಟ್‍ನಲ್ಲಿ ಇರೋರು ಆ ರಸ್ತೆ ಫ್ರೀ ಮಾಡೋದಾದ್ರೆ ನಮ್ಮ ರಸ್ತೆಯನ್ನು ಫ್ರೀ ಮಾಡಿ” ಗಲಾಟೆ ಆರಂಭಿಸಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.
ಮಹಿಳೆಯರ ಗಲಾಟೆ ಹೆಚ್ಚಾಗುತ್ತಿದ್ದಂತೆ ಎರಡು ಕೆಎಸ್‌ಆರ್‌ಪಿ ವಾಹನಗಳು ಸ್ಥಳಕ್ಕೆ ದೌಡಾಯಿಸಿತು. ಬಳಿಕ 11ನೇ ಕ್ರಾಸ್‍ನ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಪಾದರಾಯನಪುರದಲ್ಲಿ ಕೆಲ ಪುಂಡರು 15 ದಿನಗಳ ಹಿಂದೆಯಷ್ಟೇ ಚೆಕ್ ಪೋಸ್ಟ್ ನಾಶ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ 126 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಪರ ವಕೀಲ ವಕೀಲ ಇಸ್ಮಾಯಿಲ್ ಜಬೀವುಲ್ಲಾ ಅವರು ಕಕ್ಷಿದಾರರಿಗೆ ಜಾಮೀನು ನೀಡುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ವಿಚಾರಣೆ ನಡೆಸಿ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪಾದರಾಯನಪುರದಲ್ಲಿ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದರಿಂದ ಆರೋಗ್ಯ ಇಲಾಖೆಯು ರ್ಯಾಂಡಮ್ ಟೆಸ್ಟ್ ಆರಂಭಿಸಿತ್ತು. ಆಗಲೂ ಕೆಲವರು ವೈದ್ಯಕೀಯ ಸಿಬ್ಬಂದಿ, ಪೊಲೀಸರ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು.