ನಾಳೆಗೆ ಮುಕ್ತಾಯ 4ನೇ ಹಂತದ ಲಾಕ್ಡೌನ್ ಮುಕ್ತಾಯ ; 13 ನಗರಗಳನ್ನು ಹೊರತುಪಡಿಸಿ, ಕರ್ನಾಟಕವೂ ಸೇರಿದಂತೆ ಬೇರೆ ಕಡೆ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ನಿಷೇಧಾಜ್ಞೆ; ಹೊಟೆಲ್, ರೆಸ್ಟೋರೆಂಟ್, ಮಾಲ್ ಓಪನ್ ಆಗುವ ಸಾಧ್ಯತೆ – ಕಹಳೆ ನ್ಯೂಸ್
ನವದೆಹಲಿ(ಮೇ.30): ನಾಳೆಗೆ ಮುಕ್ತಾಯ 4ನೇ ಹಂತದ ಲಾಕ್ಡೌನ್ ಮುಕ್ತಾಯವಾಗಲಿದೆ. ಜೂನ್ 1ರಿಂದ 5ನೇ ಹಂತದ ಲಾಕ್ಡೌನ್ ಜಾರಿಗೆ ಬರಲಿದೆ. ಜೂನ್ 15ರವರೆಗೂ ಇರಲಿರುವ 5ನೇ ಹಂತದ ಲಾಕ್ಡೌನ್ ಕೇವಲ 13 ನಗರಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದೆಡೆ ಭಾರೀ ವಿನಾಯಿತಿ ಇರಲಿದೆ ಎಂದು ಕೇಂದ್ರ ಗೃಹ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರ ಗೃಹ ಇಲಾಖೆ ನೀಡಿರುವ 13 ನಗರಗಳನ್ನು ಹೊರತುಪಡಿಸಿ ಬೇರೆ ಕಡೆ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಆ ಮೂಲಕ ಜನ ಸಂದಣಿ ನಿಯಂತ್ರಣಕ್ಕೆ ಮುಂದಾಗುವ ಸಾಧ್ಯತೆಗಳಿವೆ. ವಿಶೇಷ ಎಂದರೆ ಆ 13ನಗರಗಳ ಪೈಕಿ ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವ ನಗರವೂ ಇಲ್ಲ.
ಇನ್ನು, ಈ 13 ನಗರಗಳಲ್ಲಿ ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರು ಸ್ಥಾನ ಪಡೆದಿವೆ. ಅತೀಹೆಚ್ಚು ಕೊರೋನಾ ಇರುವ ನಗರಗಳನ್ನು ಮಾತ್ರ ಪರಿಗಣಿಸಲಾಗಿದೆ.
ಬೆಂಗಳೂರು ಮತ್ತು ರಾಜ್ಯದ ಇತರೆ ನಗರಗಳಲ್ಲಿ ಬೇರೆ ನಗರಗಳಿಗಿಂತ ಕಡಿಮೆ ಸಂಖ್ಯೆಯ ಕೊರೋನಾ ಪೀಡಿತರಿರುವ ಕಾರಣಕ್ಕೆ ಬೆಂಗಳೂರನ್ನು ಕೈಬಿಡಲಾಗಿದೆ. ಮೊದಲ ಸುತ್ತಿನಲ್ಲಿ 11 ನಗರಗಳನ್ನು ಮಾತ್ರ ಪರಿಗಣಿಸಿದ್ದಾಗ ಬೆಂಗಳೂರಿನ ಹೆಸರು ಕೂಡ ಇತ್ತು.
ಇನ್ನೂ ಕುತೂಹಲಕಾರಿ ವಿಷಯ ಎಂದರೆ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವ ಸಾಧ್ಯತೆ ಕೂಡ ಕಂಡುಬರುತ್ತಿದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ದೂರವಾಣಿ ಮಾತುಕತೆ ವೇಳೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ಕೊಡುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.