ಗಣೇಶೋತ್ಸವಕ್ಕೂ ಕೊರೊನಾ ಸಂಕಟ – ಪುತ್ತೂರು ತಾಲೂಕಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಮ್ಮತದ ನಿರ್ಣಯ ; ಬೆಳಿಗ್ಗೆ ಮೂರ್ತಿ ಪ್ರತಿಷ್ಠೆ, ಸಂಜೆ ಜಲಸ್ತಂಭನ – ಶೋಭಾಯಾತ್ರೆಗಳು ರದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ನಿರ್ಬಂಧ – ಕಹಳೆ ನ್ಯೂಸ್
ಪುತ್ತೂರು: ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ಬಿಟ್ಟು ಬಿಡದೆ ಕಾಡುತ್ತಿರುವ ನಡುವೆಯೇ ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಜನರ ಆತಂಕ ಮುಂದುವರಿದಿದೆ. ಗೌಜಿ ಗದ್ದಲದ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಹಲವಾರು ನಿಬಂಧನೆಗಳಿರುವ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ನಡೆಸುವುದೆಂದು ಪುತ್ತೂರಿನ ಪ್ರಮುಖ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಆಗಸ್ಟ್ ೨೨ರಂದು ಗಣೇಶೋತ್ಸವ ಹಬ್ಬ ಬರುವ ಹಿನ್ನೆಲೆಯಲ್ಲಿ ಪುತ್ತೂರು ನಗರ ಪ್ರದೇಶದಲ್ಲಿ ನಡೆಯುವ ಪ್ರಮುಖ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಪ್ರಮಖರ ಸಭೆಯು ಜೂ.೭ರಂದು ಪುತ್ತೂರು ಆದರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಿತು.
ಕೊರೋನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕು ಹರಡದಂತೆ ಈಗಾಗಲೇ ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಗೆ ೫೦ರ ಒಳಗೆ ಜನಸಂಖ್ಯೆ ಸೀಮಿತಗೊಳಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸುವ ಕುರಿತು ನಿರ್ದೇಶನವಿದೆ.ಮುಂದಿನ ತಿಂಗಳು ಯಾವ ರೀತಿಯ ನಿರ್ದೇಶನ ಬರುತ್ತದೆಯೋ ಗೊತ್ತಿಲ್ಲ.ಆದರೂ ಸಾರ್ವಜನಿಕ ಧಾರ್ಮಿಕ ಉತ್ಸವದಂತಹ ಕಾರ್ಯಕ್ರಮಗಳನ್ನು ಮಾಡುವುದು ಕಷ್ಟ.ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಮತ್ತು ಸಾರ್ವಜನಿಕರಿಗೂ ತೊಂದರೆ ಉಂಟಾಗದ ರೀತಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳನ್ನು ಕೇವಲ ಕಟ್ಟುಕಟ್ಟಲೆಗೆ ಮಾತ್ರ ಸೀಮಿತಗೊಳಿಸಿ ಒಂದೇ ದಿನ ಕಾರ್ಯಕ್ರಮ ನಡೆಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
೭ ದಿನಗಳು ಪೂಜಿಸಲ್ಪಡ್ಪುವ ಕಿಲ್ಲೆ ಮೈದಾನದ ಮಹಾಗಣೇಶೋತ್ಸವ, ೪ ದಿನಗಳು ಪೂಜಿಸಲ್ಪಡುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ, ಕಾವೇರಿಕಟ್ಟೆ ಗಣೇಶೋತ್ಸವ, ಫಿಲೋಮಿನಾ ವಿನಾಯಕನಗರ ಗಣೇಶೋತ್ಸವ, ವಿವೇಕಾನಂದ ಕಾಲೇಜಿನ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಈ ಬಾರಿ ಕೊರೋನಾ ಸಂಕಟದ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಸುವ ಕುರಿತು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.ಗೌಜಿ ಗದ್ದಲದ ಕಾರ್ಯಕ್ರಮ ನಡೆಸದೆ ಒಂದು ದಿನದ ಕಾರ್ಯಕ್ರಮದಂತೆ ಬೆಳಿಗ್ಗೆ ಶ್ರೀ ಗಣೇಶನ ಪ್ರತಿಷ್ಠೆ, ಗಣಪತಿ ಹೋಮ, ಸಂಜೆ ಜಲಸ್ತಂಭನ ಮಾಡುವುದು, ದೇವರಿಗೆ ಸಾರ್ವಜನಿಕವಾಗಿ ಭಕ್ತರಿಂದ ಯಾವುದೇ ಸೇವೆ ಇರುವುದಿಲ್ಲ.ಒಟ್ಟು ಕಾರ್ಯಕ್ರಮದಲ್ಲಿ ಸಮಿತಿ ಪದಾಧಿಕಾರಿಗಳು ಮಾತ್ರ ಭಾಗವಹಿಸುವುದು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ವಿ.ಜಿ.ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿಲ್ಲೆ ಮೈದಾನದ ಮಹಾಗಣೇಶೋತ್ಸವ ಸಮಿತಿ ಪರವಾಗಿ ಸಮಿತಿ ಪದಾಧಿಕಾರಿಗಳಾದ ಸುದೇಶ್ ಚಿಕ್ಕಪುತ್ತೂರು, ದಿನೇಶ್ ಪಿ.ವಿ, ಕಾವೇರಿಕಟ್ಟೆ ಗಣೇಶೋತ್ಸವ ಸಮಿತಿಯ ಗಣೇಶ್ ಮತ್ತು ದಿನೇಶ್, ಫಿಲೋಮಿನಾ ವಿನಾಯಕ ನಗರ ಗಣೇಶೋತ್ಸವ ಸಮಿತಿಯ ಪ್ರಕಾಶ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಶ್ರೀನಿವಾಸ್, ಜೊತೆ ಕಾರ್ಯದರ್ಶಿ ನೀಲಂತ್ ಕುಮಾರ್, ಅಶೋಕ್ ಕುಂಬ್ಳೆ, ಅಜಿತ್ ರೈ, ದಯಾನಂದ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು,ಮಾಜಿ ಸದಸ್ಯರಾದ ಚಂದ್ರಸಿಂಗ್, ಸುಜೀಂದ್ರ ಪ್ರಭು, ಕೋರ್ಟ್‌ರಸ್ತೆಯ ಜಗದೀಶ್ ಶೆಣೈ ಭಾಮಿ, ಹೆಚ್. ಉದಯ ಮತ್ತಿತರ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.