ಉಡುಪಿ: ಮುಂಗಾರು ಆರಂಭದ ಮಳೆಗೆ ಬಾಲಕ ನೀರಿನಲ್ಲಿ ಕೊಚ್ಚಿಹೋದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನಲ್ಲಿ ಬೀಸಿದ ಬಾರೀ ಮಳೆಗೆ ಬಾಲಕನೊಬ್ಬ ಬಲಿಯಾಗಿದ್ದಾನೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಾನ್ಬೆಟ್ಟಿನಲ್ಲಿ ಹರಿಯುವ ನದಿಗೆ ಬಿದ್ದು ಸಾವನ್ನಪ್ಪಿದ ಬಾಲಕ ಶ್ರೀಕಾಂತ್ ಭಟ್. ಈತ ಮನೆ ಮುಂದೆಯ ಸಣ್ಣ ಕಾಲುವೆ ಸನಿಹ ಓಡಾಡುತ್ತಿದ್ದ. ಇದ್ದಕ್ಕಿದ್ದ ಹಾಗೆ ಕಾಲು ಜಾರಿ ಕೆಳಗೆ ಬಿದ್ದು ಕೊಚ್ಚಿ ಹೋಗಿದ್ದಾನೆ. ಆತನನ್ನು ಮೇಲಕೆತ್ತುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಸ್ಥಳೀಯ ಅಮೃತ ಭಾರತಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದನು. ಈತ ಕಾನ್ ಬೆಟ್ಡು ನಿವಾಸಿ ದಯಾನಂದ ಭಟ್ ಅವರ ಪುತ್ರ. ಸದ್ಯ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ನದಿಯಲ್ಲಿ ತೇಲಿಬಂದ ಶವ: ಬೈಂದೂರಿನ ಗಂಗೊಳ್ಳಿಯಲ್ಲಿ ಅನಾಥ ಶವ ನದಿಯಲ್ಲಿ ತೇಲಿ ಬಂದಿದೆ. ಸೌಪರ್ಣಿಕಾ ನದಿಯಲ್ಲಿ ತೇಲುತ್ತಿದ್ದ ಅಪರಿಚಿತ ಶವವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ. ಮೂರು ದಿನಗಳ ಹಿಂದೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ನದಿಗೆ ಬಿದ್ದಿರುವ ಸಾಧ್ಯತೆಯಿದ್ದು, ಸ್ಥಳೀಯ ನಾಗರಿಕರ ನೆರವಿನಿಂದ ಶವ ಮೇಲಕ್ಕೆತ್ತಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಕಾನೂನು ಪ್ರಕ್ರಿಯೆಗಳನ್ನು ನೋಡಿಕೊಂಡರು.