ನವದೆಹಲಿ: ದೇಶಾದ್ಯಂತ ಅನ್ಲಾಕ್-1ರಲ್ಲಿ ಅಂಗಡಿಗಳು, ವ್ಯಾಪಾರ ವಹಿವಾಟು, ಉದ್ದಿಮೆಗಳು ಮರುಆರಂಭಗೊಂಡಿವೆ. ಏತನ್ಮಧ್ಯೆ ಕೇಂದ್ರ ಗೃಹ ಸಚಿವಾಲಯ ಜೂನ್ 15ರಿಂದ ಮತ್ತೆ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಿದೆ ಎಂಬ ಸುತ್ತೋಲೆಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದೇಶೀಯ ವಿಮಾನ ಓಡಾಟ, ರೈಲುಗಳು ಸೇರಿದಂತೆ ಮತ್ತೆ ದೇಶಾದ್ಯಂತ ಜೂನ್ 15ರಿಂದ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೊಳಿಸುವತ್ತ ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ ಎಂಬ ಹಿಂದಿ ಸುದ್ದಿವಾಹಿನಿ ವರದಿಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಹಿಂದಿ ಸುದ್ದಿವಾಹಿನಿಯ ವರದಿಯ ಸ್ನಿಪ್ ಶಾಟ್ ಫೋಟೋ ನಕಲಿ ಮತ್ತು ಸುಳ್ಳುಸುದ್ದಿಯಾಗಿದೆ. ಜೂನ್ 15ರಿಂದ ಮತ್ತೆ ಲಾಕ್ಡೌನ್ ಜಾರಿಗೊಳಿಸುವ ಸಂಬಂಧ ಸರ್ಕಾರದಿಂದ ಯಾವ ಘೋಷಣೆಯೂ ಅಧಿಕೃತವಾಗಿ ಹೊರಬಂದಿಲ್ಲ. ಇಂತಹ ಸುದ್ದಿಯನ್ನು ಯಾವ ಸುದ್ದಿವಾಹಿನಿಗಳೂ ಸಹ ಪ್ರಸಾರ ಮಾಡಿಲ್ಲ.
ಜೂನ್ 1ರಿಂದ ಅನ್ಲಾಕ್-1 ಹಂತ ಜಾರಿಯಾಗಿದ್ದು, ಒಟ್ಟು ಮೂರು ಹಂತಗಳಲ್ಲಿ ಲಾಕ್ಡೌನ್ಅನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಜೂನ್ 8ರೊಳಗೆ ಮೂರು ಹಂತಗಳು ಮುಕ್ತಾಯಗೊಂಡಿದ್ದು, ಮಾಲ್ಗಳು, ರೆಸ್ಟೋರೆಂಟ್ಗಳು ಹಾಗೂ ಧಾರ್ಮಿಕ ಕೇಂದ್ರಗಳು ಸೇರಿದಂತೆ ಎಲ್ಲ ರೀತಿಯ ವಹಿವಾಟುಗಳು ದೇಶವ್ಯಾಪಿ ಆರಂಭಗೊಂಡಿವೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದೇಶೀಯ ವಿಮಾನಗಳು ಮತ್ತು ರೈಲುಗಳು ಓಡಾಟ ಆರಂಭಿಸಿವೆ. ಕೇಂದ್ರ ಗೃಹ ಸಚಿವಾಲಯ ಮತ್ತೆ ದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸಲಿದೆ ಎಂಬ ಯಾವುದೇ ಸುದ್ದಿ ಈವರೆಗೂ ಬಂದಿಲ್ಲ.