ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ..T20 ವಿಶ್ವಕಪ್ ನಡೆಸುವ ಸೂಚನೆ ನೀಡಿದ್ರಾ ಆಸಿಸ್ ಪ್ರಧಾನಿ-ಕಹಳೆ ನ್ಯೂಸ್
ಕೊರೊನಾ ವೈರಸ್ ಹಾವಳಿಯಿಂದಾಗಿ ಕಳೆದ ಮೂರು ತಿಂಗಳಿಂದ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದ್ರೀಗ ಮತ್ತೆ ಕ್ರೀಡಾಪಟುಗಳು ಅಂಗಳಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ವಿವಿಧ ದೇಶಗಳು ಮುಚ್ಚಿದ ಬಾಗಿಲುಗಳಲ್ಲಿ ಕ್ರೀಡಾಕೂಟಗಳ ಆಯೋಜನೆಗೆ ಸಿದ್ಧತೆ ನಡೆಸಿವೆ. ಮತ್ತೊಂದೆಡೆ ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲು ಮುಂದಾಗಿದೆ. ಹೌದು..! 40 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 10, ಸಾವಿರ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.
ಇದರಿಂದ ಆಸ್ಟ್ರೇಲಿಯಾದ ಎರಡು ದೊಡ್ಡ ಪಂದ್ಯಾವಳಿಗಳಾದ ನ್ಯಾಷನಲ್ ರಗ್ಬಿ ಲೀಗ್ (ಎನ್ಆರ್ಎಲ್) ಹಾಗೂ ಆಸ್ಟ್ರೇಲಿಯಾ ಫುಟ್ಬಾಲ್ ಲೀಗ್ ಪಂದ್ಯಗಳನ್ನ ಪ್ರೇಕ್ಷಕರು ಮೈದಾನದಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ಆಸ್ಟ್ರೇಲಿಯಾ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಮೂಲಕ ಟಿ-20 ವಿಶ್ವಕಪ್ ಟೂರ್ನಿ ನಡೆಸಲು ನಾವು ಸಿದ್ಧ ಎನ್ನುವ ಸೂಚನೆ ನೀಡಿದೆಯಾ ಅನ್ನಿಸುತ್ತಿದೆ. ಇದೇ ವರ್ಷ ಕಾಂಗರೂ ನಾಡಲ್ಲಿ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಆದರೆ, ಕೊರೊನಾ ವೈರಸ್ನಿಂದಾಗಿ ಟೂರ್ನಿ ಮುಂದೂಡಬಹುದು ಎನ್ನುವ ಮಾತುಗಳು ಕೇಳಿ ಬರ್ತಿವೆ. ಈ ನಡುವೆ ಆಸ್ಟ್ರೇಲಿಯಾ ಕ್ರೀಡಾಚಟುವಟಿಕೆಗಳಿಗೆ ಅವಕಾಶ ನೀಡುವುದಷ್ಟೇ ಅಲ್ಲದೇ, ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡಿದೆ.
ಇದಕ್ಕೂ ಮುನ್ನ ಇತ್ತೀಚೆಗೆ ಆಸ್ಟ್ರೇಲಿಯಾ ಕ್ರೀಡಾ ಸಚಿವ ಕಾಲ್ಬೆಕ್, ಟಿ-20 ವಿಶ್ವಕಪ್ ಟೂರ್ನಿ ನಡೆಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಟೂರ್ನಿ ವೇಳೆ ಆಟಗಾರರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಸಿದ್ಧರಿದ್ದೇವೆ. ಕ್ರಿಕೆಟ್ ಆಸ್ಟ್ರೇಲಿಯಾ, ಐಸಿಸಿ ವಿಶ್ವಕಪ್ ಸ್ಥಳೀಯ ಸಂಘಟನಾ ಸಮಿತಿ ಆಸ್ಟ್ರೇಲಿಯಾ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಟೂರ್ನಿ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು, ಆಟಗಾರರಿಗೆ ವಸತಿ ಸೌಲಭ್ಯ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಟಿ-20 ವಿಶ್ವಕಪ್ ನಡೆದ್ರೆ ಐಪಿಎಲ್ ನಡೆಯೋದು ಡೌಟ್..!
ಹೌದು, ಎಲ್ಲಾ ಸರಿ ಇದ್ದರೆ ಇಷ್ಟೊತ್ತಿಗಾಗಲೇ ಐಪಿಎಲ್ 13 ಟೂರ್ನಿ ನಡೆದಿರುತ್ತಿತ್ತು. ಆದರೆ ಕೊರೊನಾ ಅದಕ್ಕೆ ಆಸ್ಪದೇ ನೀಡಲಿಲ್ಲ. ಇದರಿಂದ ಕ್ರಿಕೆಟ್ ಲೋಕದ ಶ್ರೀಮಂತ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ, ಒಂದು ವೇಳೆ ನಿಗದಿತ ವೇಳಾಪಟ್ಟಿಯಂತೆ ಟಿ-20 ವಿಶ್ವಕಪ್ ಟೂರ್ನಿ ನಡೆಯದಿದ್ದರೆ, ಆ ಅವಧಿಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲಾನ್ ಮಾಡಿದೆ. ಚುಟುಕ ವಿಶ್ವಕಪ್ ನಡೆದಿದ್ದೇ ಆದಲ್ಲಿ ಐಪಿಎಲ್ ನಡೆಯೋದೆ ಅನುಮಾನ ಎನ್ನಲಾಗ್ತಿದೆ.