Friday, September 20, 2024
ಸುದ್ದಿ

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಲಿಪಶು ಮಾಡುವ ಷಡ್ಯಂತ್ರ್ಯವನ್ನು ನಿಲ್ಲಿಸಿ

ಮಂಗಳೂರು, ಮಾ.೭ : ವಿನಾಕಾರಣವಾಗಿ ಹಿಂದೂ ಸಂಘಟನೆಗಳನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಾಗೂ ಎಲ್ಲಾ ಹಿಂದೂಪರ ಸಂಘಟನೆಗಳ ವತಿಯಿಂದ ಮಹಾನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಾ, ಸೆಪ್ಟೆಂಬರ್ ೫ ರಂದು ಬೆಂಗಳೂರಿನ ಪತ್ರಕರ್ತೆ ಗೌರಿ ಲಂಕೇಶರವರ ಹತ್ಯೆ ನಡೆದಿದ್ದು, ಅದರ ತನಿಖೆಗಾಗಿ ರಾಜ್ಯ ಸರಕಾರವು ಎಸ್‌ಐಟಿಯ ರಚನೆ ಮಾಡಿತ್ತು. ಅದರ ನಂತರ ಕಳೆದ ೭ ತಿಂಗಳಿನಿಂದ ಎಸ್‌ಐಟಿಯು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಆದರೆ ಹಿಂದೂ ಸಂಘಟನೆಗಳನ್ನು ಅವಮಾನ ಮಾಡುವ ಉದ್ದೇಶದಿಂದ  ಫೆಬ್ರವರಿ ೧೮ ರಂದು ಪೋಲಿಸರು, ಮಂಡ್ಯ ಜಿಲ್ಲೆಯ ಮದ್ದೂರಿನ ಹಿಂದೂ ಯುವ ಸೇನೆಯ ಶ್ರೀ. ನವೀನ ಕುಮಾರ ಎನ್ನುವ ಅಮಾಯಕನನ್ನು ಅಕ್ರಮ ಶಸ್ತ್ರಾಸ್ತ್ರದ ಅಡಿಯಲ್ಲಿ ಬಂಧಿಸಿತು. ಅಷ್ಟೇ ಅಲ್ಲದೇ ಈಗ ಅವರನ್ನೇ ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ಅವರ ಸ್ನೇಹಿತರನ್ನು ಪೋಲಿಸರು ಬಂಧಿಸಿ, ಅವರಿಗೆ ಒತ್ತಾಯ ಪೂರ್ವಕವಾಗಿ ಅವರಿಂದ ತಪ್ಪು ಒಪ್ಪಿಕೊಳ್ಳುವಂತೆ ಪೊಲೀಸರು ಜೀವ ಬೆದರಿಕೆ ಹಾಕಿರುವುದು ಅಷ್ಟೇಅಲ್ಲದೇ ನವೀನ್ ಕುಮಾರ ಇವರಿಗೂ ಒಪ್ಪಿಕೊಳ್ಳದಿದ್ದರೆ ಎನ್‌ಕೌಂಟರ್ ಮಾಡುವ ಬೆದರಿಕೆ ಹಾಕಿರುವುದು ಗಮನಕ್ಕೆ ಬಂದಿದೆ. ಕೆಲವು ಮಾಧ್ಯಮದವರು ನವೀನ ಕುಮಾರ ಸ್ನೇಹಿತ ಗಿರೀಶ ಮತ್ತು ಅವನ ಸಹೋದರನ ಸಂದರ್ಶನವನ್ನು ತೆಗೆದುಕೊಂಡಿದ್ದು, ಅದರಲ್ಲಿ ಪೊಲೀಸರು ಅವರಿಗೂ ಜೀವ ಬೆದರಿಕೆ ಹಾಕಿ, ಪೋಲಿಸರು ಹೇಳಿದಂತೆ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡುವಂತೆ ಒತ್ತಡ ಹಾಕಿರುವುದು ಗಮನಕ್ಕೆ ಬಂದಿದೆ. ಒಟ್ಟಾರೆ ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದಾಗ ರಾಜ್ಯ ಸರಕಾರ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿ, ಪ್ರಕರಣದ ರಾಜಕೀಯ ಲಾಭ ಪಡೆಯಲು ಅಮಾಯಕ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಸಿಲುಕಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಎಂದರು.
ಈ ಹಿಂದೆಯೂ ಮಹಾರಾಷ್ಟ್ರದ ವಿಚಾರವಾದಿಗಳ ಹತ್ಯೆ ಪ್ರಕರಣ ಮತ್ತು ಮಾಲೆಗಾವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಅಮಾಯಕ ಹಿಂದೂ ನೇತಾರರನ್ನು ಸಿಲುಕಿಸುವ ಷಡ್ಯಂತ್ರ್ಯವನ್ನು ಅಲ್ಲಿನ ಸರಕಾರ ಪ್ರಯತ್ನ ಮಾಡಿತ್ತು. ಮಹಾರಾಷ್ಟ್ರದ ಮಾದರಿಯಲ್ಲಿಯೇ ಗೌರಿ ಲಂಕೇಶ ಪ್ರಕರಣವನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟಿ, ಕೈ ತೊಳೆದುಕೊಳ್ಳುವ ಮತ್ತು ಆ ಮೂಲಕ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬರುತ್ತಿದೆ. ಇದು ಅತ್ಯಂತ ಖಂಡನೀಯವಾಗಿದೆ. ರಾಜ್ಯ ಸರಕಾರ ತನ್ನ ಕಾನೂನು ಸುವ್ಯವಸ್ಥೆಯ ವಿಫಲತೆಯನ್ನು ಮುಚ್ಚಿಹಾಕಲು ಈ ಪ್ರಕರಣವನ್ನು ಉಪಯೋಗಿಸುತ್ತಿರುವುದು ಖೇದದ ಸಂಗತಿಯಾಗಿದೆ. ಕೂಡಲೇ ರಾಜ್ಯ ಸರಕಾರವು ಹಿಂದೂ ಸಂಘಟನೆಯನ್ನು ಬಲಿಪಶು ಮಾಡುವ ಪ್ರಯತ್ನವನ್ನು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ಪರಿಣಾಮವನ್ನು ರಾಜ್ಯ ಸರಕಾರವು ಅನುಭವಿಸಬೇಕಾಗಬಹುದು. ಎಂಬ ಎಚ್ಚರಿಕೆಯನ್ನು ಉಪಸ್ಥಿತ ಹಿಂದೂ ಧರ್ಮಪ್ರೇಮಿಗಳು ನೀಡಿದರು.
ಕೂಡಲೇ ರಾಜ್ಯ ಸರಕಾರ ಹಿಂದೂ ಸಂಘಟನೆಗಳನ್ನು ಬಲಿಪಶು ಮಾಡುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಧರ್ಮಪ್ರೇಮಿಗಳಾದ ದಯಾನಂದ ವಲಚ್ಚಿಲ್, ಲೋಕೇಶ್ ಕುತ್ತಾರ್, ಸತೀಶ್ ಕೆ, ತುಳುನಾಡು ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ, ಹಿಂದೂ ಮಹಾಸಭಾದ ಧಮೇಂದ್ರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಭಾಕರ ನಾಯ್ಕ್, ಶ್ರೀ. ರಮೇಶ್ ನಾಯಕ್, ಶ್ರೀ. ಉಪೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು