ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಿಂದ ಚಿತ್ರ ರಚಿಸಿ ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ–ಕಹಳೆ ನ್ಯೂಸ್
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸುರಕ್ಷಾ ಕೋಲ್ಪೆ ತನ್ನ ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿ, ಸಾಧಕಿ ಸುಧಾಮೂರ್ತಿ, ಅಣ್ಣಾಮಲೈ ಹೀಗೆ ಅನೇಕ ಖ್ಯಾತನಾಮರ ಪೆನ್ಸಿಲ್ ಸ್ಕೆಚ್‌ಗಳ ಭಾವಚಿತ್ರ ಈಗಾಗಲೇ ರಚಿಸಿ ಅವರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಂಡಿರುವ ಈಕೆ ತಾನು ಕಲಿತಿರುವ ಕಾಲೇಜಿನ ಗುರುಗಳ ಚಿತ್ರವನ್ನು ರಚಿಸಿ ಅವರ ಪ್ರೀತಿಗೂ ಪಾತ್ರರಾಗಿದ್ದಾಳೆ.
ತಾನು ಮಾಡುವ ಕಲೆಗೆ ಸಂಭಾವನೆ ಬಯಸದ ಈಕೆ ತನ್ನ ಗುರುಗಳೊಬ್ಬರಿಗೆ ಗೌರವಪೂರ್ವಕವಾಗಿ ಮಾಡಿಕೊಟ್ಟ ಅವರದೇ ಚಿತ್ರಕ್ಕೆ ೨೦೦೦ರೂ ಗೌರವಧನ ನೀಡುವುದಾಗಿ ಹೇಳಿದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದಾಳೆ.ತಾವು ನೀಡುವ ಹಣದಲ್ಲಿ ಬೇಕಾದಷ್ಟು ಇರಿಸಿಕೊಂಡು ಮಿಕ್ಕಹಣವನ್ನು ಪ್ರಧಾನಿಗಳ ಪರಿಹಾರ ನಿಧಿಗೆ ಕೊಡು ಎಂಬ ಸಲಹೆ ಅನುಸರಿಸಿದ ಸುರಕ್ಷಾ ಕೋಲ್ಪೆ ಗೌರವಧನವಾಗಿ ದೊರೆತ ಅಷ್ಟೂ ಹಣವನ್ನು ಪ್ರಧಾನಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ.
ಇವಳು ರಚಿಸಿದ ಚಿತ್ರಕ್ಕೆ ಎಲ್ಲರೂ ಚಕಿತಗೊಂಡಿದ್ದು ಈಗ ಹಲವಾರು ಜನ ತಮ್ಮ ಪೆನ್ಸಿಲ್ ಸ್ಕೆಚ್ ಮಾಡಿ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.
ಪ್ರತಿ ಸ್ಕೆಚ್ ಗಳಿಂದ ಬರುತ್ತಿರುವ ಸಂಪೂರ್ಣ ಹಣವನ್ನು ಆಕೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುತ್ತಾ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಇತರರಿಗೆ ಮಾದರಿಯಾಗಿದ್ದಾಳೆ. ನಾಗರೀಕ ಸೇವೆಯಲ್ಲಿ ಐಪಿಯಸ್ ಅಧಿಕಾರಿಯಾಗಬೇಕೆಂದು ಅಪೇಕ್ಷಿಸಿರುವ ಈಕೆ ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಪೂವಪ್ಪ ಗೌಡ ಮತ್ತು ಗುಲಾಬಿ ದಂಪತಿಗಳ ಪುತ್ರಿ.