ಇಂಡೋ-ಚೀನಾ ಗಡಿಯಲ್ಲಿ ಏನಾಗ್ತಿದೆ..? ಕೆರಳಿದ ಸೇನೆ, ಭಾರತೀಯ ಯೋಧರ ಪ್ರತಿದಾಳಿಯಲ್ಲಿ ಮೂವರು ಸೈನಿಕರ ಸಾವು..!- ಕಹಳೆ ನ್ಯೂಸ್
ಗಲ್ವಾನ್ (ಲಡಾಖ್), ಜೂ.16- ಇಂಡೋ-ಚೀನಾ ಗಡಿ ಪ್ರದೇಶದಲ್ಲಿ ನಿನ್ನೆ ಚೀನಿ ಸೈನಿಕರು ಭಾರತೀಯ ಸೇನಾ ಪಡೆಯ ಓರ್ವ ಅಕಾರಿ ಸೇರಿದಂತೆ ಮೂವರು ಯೋಧರನ್ನು ಕೊಂದಿದ್ದಾರೆ. ಚೀನಿ ಸೇನಾಪಡೆಯ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಯೋಧರ ಪ್ರತಿದಾಳಿಯಲ್ಲಿ ವೈರಿ ಪಡೆಯ ಮೂವರು ಸೈನಿಕರು ಹತರಾಗಿದ್ದಾರೆ.
45 ವರ್ಷಗಳ ಬಳಿಕ ಭಾರತ-ಚೀನಾ ನಡುವೆ ನಡೆದ ಗುಂಡಿನ ಚಕಮಕಿಯಿಂದ ಪೂರ್ವ ಲಡಾಖ್‍ನ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿದ್ದು, ಕದನ ಕಾರ್ಮೋಡಗಳು ದಟ್ಟವಾಗುತ್ತಿವೆ. ಈ ನಡುವೆ ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಉಭಯ ದೇಶಗಳ ಉನ್ನತ ಸೇನಾಕಾರಿಗಳು ನಡೆಸುತ್ತಿರುವ ಸಭೆ ಮುಂದುವರಿದಿದೆ.
ಪೂರ್ವ ಲಡಾಖ್‍ನ ಗಲ್ವಾನ್ ಪ್ರಾಂತ್ಯದಲ್ಲಿ ನಿನ್ನೆ ನಡೆದ ಸಂಘರ್ಷದಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಕಾರಿಯೊಬ್ಬರು ತಿಳಿಸಿದ್ದಾರೆ. ಪೂರ್ವ ಲಡಾಖ್ ಪ್ರದೇಶದ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿರುವ ಸಂದರ್ಭದಲ್ಲೇ ಚೀನಾದ ಈ ಉದ್ಧಟತನದ ಪುಂಡಾಟ ಭಾರತೀಯ ಯೋಧರನ್ನು ಕೆರಳಿಸಿದೆ.
ಉನ್ನತ ಸೇನಾಕಾರಿಗಳ ಮಟ್ಟದ ಎರಡು ಸುತ್ತಿನ ಮಾತುಕತೆ ಬಳಿಕ ಗಡಿಯಲ್ಲಿ ಶಾಂತಿ ಕಾಪಾಡುವುದಾಗಿ ವಾಗ್ದಾನ ಮಾಡಿದ್ದ ಚೀನಾ ತೋರಿಸಿರುವ ತನ್ನ ನರಿಬುದ್ಧಿಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ರಾತ್ರಿ ಗಡಿ ಭಾಗದಲ್ಲಿ ಇಂಡೋ-ಚೀನಾ ಸೈನಿಕರ ನಡುವೆ ನಡೆದ ಗುಂಡಿನ ಕಾಳಗದ ವೇಳೆ ಓರ್ವ ಸೇನಾಕಾರಿ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇನ್ನೂ ಕೆಲ ಯೋಧರಿಗೆ ಗಾಯಗಳಾಗಿವೆ ಎಂದು ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿ ಬಿಕ್ಕಟ್ಟನ್ನು ಶಾಂತಿಯುತ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದ ಚೀನಾ ಸೇನಾಪಡೆಯ ದುರ್ವರ್ತನೆ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಚೀನಿ ಸೈನಿಕರ ಉದ್ಧಟತನವನ್ನು ಖಂಡಿಸಿದೆ.
ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ಶಮನಗೊಳ್ಳುವ ಹಂತದಲ್ಲೇ ಈ ಘಟನೆ ನಡೆದಿದ್ದು, ಲಡಾಖ್ ಪ್ರದೇಶದಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ತಲೆದೋರಿದೆ. ಲೆಫ್ಟಿನೆಂಟ್ ಜನರಲ್ ಮತ್ತು ಮೇಜರ್ ಜನರಲ್ ಮಟ್ಟದ ಎರಡು ಸುತ್ತಿನ ಮಾತುಕತೆ ಬಳಿಕ ತಣ್ಣಗಾಗಿದ್ದ ಚೀನಾ ಈಗ ಮತ್ತೊಮ್ಮೆ ತನ್ನ ವಕ್ರಬುದ್ಧಿಯನ್ನು ಪ್ರದರ್ಶಿಸಿದೆ.
ಪೂರ್ವ ಲಡಾಖ್‍ನ ಪಂಗಾನ್ ಸರೋವರ ಪ್ರದೇಶದಿಂದ ತನ್ನ ಸೇನೆಯನ್ನು ಎರಡೂವರೆ ಕಿಲೋ ಮೀಟರ್ ಹಿಂದೆ ಕರೆಸಿಕೊಂಡಿದ್ದ ಚೀನಾ ಇನ್ನೂ ಕೆಲವು ಪ್ರದೇಶಗಳಲ್ಲಿ ತನ್ನ ಸೈನಿಕರ ಜಮಾವಣೆಯನ್ನು ಮುಂದುವರಿಸಿತ್ತು.
ಲಡಾಖ್ ಮತ್ತು ಸಿಕ್ಕಿಂ ಪ್ರದೇಶಗಳಲ್ಲಿ ಗಡಿ ಬಿಕ್ಕಟ್ಟು ಶಮನಗೊಳಿಸಲು ತಾನು ಉಸ್ತುಕವಾಗಿರುವುದಾಗಿ ಹೇಳಿದ ಚೀನಾ ಈಗ ಮತ್ತೆ ಅಪ್ರಚೋದಿತ ದಾಳಿ ನಡೆಸಿ ಮೂವರು ಭಾರತೀಯ ಯೋಧರನ್ನು ಕೊಂದಿರುವುದು ಭಾರತೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ತ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಸೇನೆ ಮತ್ತು ಪಾಕ್ ಸರ್ಕಾರದ ಕುಮ್ಮಕ್ಕಿನಿಂದ ಭಯೋತ್ಪಾದಕರ ಉಪಟಳ ಹೆಚ್ಚಾಗಿರುವಾಗಲೇ ಇತ್ತ ಇಂಡೋ-ಚೀನಾ ಗಡಿ ಪ್ರದೇಶದಲ್ಲೂ ಪ್ರಕ್ಷುಬ್ಧಮಯ ಪರಿಸ್ಥಿತಿ ತಲೆದೋರಿದೆ.
ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಮೊನ್ನೆಯಷ್ಟೆ ಭಾರತ ಸೇನೆ ದುರ್ಬಲವಲ್ಲ, ತನ್ನ ಗೌರವ ಮತ್ತು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸದಾ ಸನ್ನದ್ಧವಾಗಿದೆ ಎಂದು ಚೀನಾ ಮತ್ತು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಎರಡು ದಿನಗಳ ನಂತರ ಚೀನಿ ಸೇನಾ ಪಡೆ ಈ ದಾಳಿ ನಡೆಸಿದೆ.
ತನ್ನ ಸಹೋದ್ಯೋಗಿಗಳನ್ನು ಕಳೆದುಕೊಂಡಿರುವ ಭಾರತೀಯ ಸೇನಾಪಡೆ ಈ ಘಟನೆಯಿಂದ ಕೆಂಡಾಮಂಡಲವಾಗಿದ್ದು, ಕಮ್ಯುನಿಸ್ಟ್ ದೇಶದ ಸೈನಿಕರಿಗೆ ದಿಟ್ಟ ಪ್ರತ್ಯುತ್ತರ ನೀಡಲು ಸಜ್ಜಾಗಿದ್ದಾರೆ.
ಭಾರತೀಯ ಭೂ ಸೇನಾಪಡೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮೊನ್ನೆ ತಾನೆ ಗಡಿ ಬಿಕ್ಕಟ್ಟು ಇತ್ಯರ್ಥಗೊಳಿಸಲು ಚೀನಾ ಒಲವು ತೋರಿದೆ ಎಂದು ತಿಳಿಸಿದ್ದರು. ಆದರೆ, ಚೀನಾ ಎಂದಿನಂತೆ ತನ್ನ ದುರ್ಬುದ್ಧಿ ತೋರಿಸಿರುವುದು ಈಗ ಜಗಜ್ಜಾಹೀರಾಗಿದೆ. ಇಂದು ಮಧ್ಯಾಹ್ನ ಚೀನಾ ಉದ್ಧಟತನದ ಬಗ್ಗೆ ಭಾರತೀಯ ಸೇನಾಪಡೆಯ ಉನ್ನತಾಕಾರಿಗಳು ಸುದ್ದಿಗೋಷ್ಠಿ ನಡೆಸಿ ಕೆಂಪುರಾಷ್ಟ್ರದ ಸೈನಿಕರ ದುರ್ವರ್ತನೆಯನ್ನು ಉಗ್ರವಾಗಿ ಖಂಡಿಸಿದರು.
ಕಮ್ಯುನಿಸ್ಟ್ ದೇಶ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ. ಚೀನಾ ಸುಳ್ಳು ಆರೋಪ: ಅಪ್ರಚೋದಿತ ದಾಳಿ ನಡೆಸಿ ಭಾರತೀಯ ಸೇನಾಪಡೆಯ ಮೂವರು ಯೋಧರನ್ನು ಕೊಂದಿರುವ ಚೀನಾ ಈಗ ಭಾರತದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದೆ.
ಈ ಘಟನೆ ನಂತರ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿರುವ ಚೀನಾ ಸೇನಾಪಡೆ ಭಾರತೀಯ ಯೋಧರೇ ಮೊದಲು ಗುಂಡು ಹಾರಿಸಿದರು. ಈ ಕಾರಣಕ್ಕಾಗಿ ತಾವು ಪ್ರತಿದಾಳಿ ನಡೆಸಬೇಕಾಯಿತು ಎಂದು ಕುಂಟುನೆಪ ನೀಡಿದೆ. ಮೊದಲಿನಿಂದಲೂ ಭಾರತದ ಮೇಲೆ ಕಾಲು ಕೆರೆದುಕೊಂಡು ತಗಾದೆ ನೀಡುತ್ತಿರುವ ಚೀನಾದ ಈ ವರ್ತನೆ ಬಗ್ಗೆ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಖಂಡಿಸಿವೆ.
ಗಡಿಯಲ್ಲಿ ಸಂಯಮ ಕಾಯ್ದುಕೊಳ್ಳುವ ಬದಲು ಚೀನಾ ಕ್ಷುಲ್ಲಕ ಕಾರಣಕ್ಕಾಗಿ ಪುಂಡಾಟ ನಡೆಸಿರುವುದು ಖಂಡನಾರ್ಹ ಎಂದು ಅಮೆರಿಕ ವಿದೇಶಾಂಗ ಮತ್ತು ರಕ್ಷಣಾ ಇಲಾಖೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.