ಕೊರೊನಾಕ್ಕಿಂತಲೂ ಅಪಾಯಕಾರಿಯಾಗಿ ಹಬ್ಬುತ್ತಿದೆ ಮಾರಕ ಡೆಂಗ್ಯೂ ; ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕಿಲ್ಲರ್ ಡೆಂಗ್ಯೂ..! ನಿರ್ಲಕ್ಷ್ಯ ಮಾಡಿದ್ರೆ, ಸಾವು ಪಕ್ಕ – ಕಹಳೆ ನ್ಯೂಸ್
ಮಂಗಳೂರು, ಜೂ 20 : ದೇಶದೆಲ್ಲೆಡೆ ಕೊರೊನಾ ಮಾಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಇದೀಗ ಮಳೆಗಾಲ ಆರಂಭಗೊಂಡಿದ್ದು, ಕೊರೊನಾ ಹೆಚ್ಚಾಗುತ್ತಿರುವ ವೇಳೆಯಲ್ಲೇ ಮಾರಕ ಡೆಂಗ್ಯೂ ಆತಂಕ ಶುರುವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ ಮೂವರನ್ನು ಬಲಿಪಡೆದುಕೊಂಡಿದೆ. ಇದೀಗ ಆರಂಭಿಕ ಹಂತವಾಗಿದ್ದು, ಮತ್ತಷ್ಟು ಸಾವು ನೋವುಗಳು ಸಂಭವಿಸದಂತೆ ಬುಡದಲ್ಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾಗಿದೆ.
ಕೆಳೆದ ವರ್ಷ ಹಾಗೂ ಜೂನ್ ತಿಂಗಳು ಆರಂಭಗೊಂಡ ಬಳಿಕದ ಪ್ರಕರಣಗಳನ್ನು ಗಮನಿಸಿದಾಗ ಡೆಂಗ್ಯೂ ಕೊರೊನಾಗಿಂತಲೂ ಮಾರಕವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇದೀಗಲೆ ಮಳೆಗಾಲ ಆರಂಭಗೊಂಡಿದ್ದು, ಡೆಂಗ್ಯೂ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಜೂನ್ ತಿಂಗಳು ಆರಂಭಗೊಂಡ ಬಳಿಕ ಜಿಲ್ಲೆಯಲ್ಲಿ ಡೆಂಗ್ಯೂ ಮಹಾಮಾರಿಗೆ ಮೂವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಬ್ಬರು ಹಾಗೂ ಪುತ್ತೂರು ತಾಲೂಕಿನಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನಂಪ್ರತಿ ಹೆಚ್ಚಾವಾಗುತ್ತಿವೆ. ಕೇವಲ 20 ದಿನಗಳ ಅಂತರದಲ್ಲೇ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಕೇಸ್ ಗಳು ಪತ್ತೆಯಾಗಿವೆ. ಕೊರೊನಾ ಮಹಾಮಾರಿಗೆ ಹೋಲಿಸಿದಾಗ ಡೆಂಗ್ಯೂ ಕೊರೊನಾಗಿಂತಲೂ ಅಪಾಯಕಾರಿ ಎನಿಸತೊಡಗಿದೆ. ಸದ್ಯ ಗ್ರಾಮಾಂತರ ಪ್ರದೇಶದಲ್ಲೇ ಅಧಿಕ ಡೆಂಗ್ಯು ಪ್ರಕರಣಗಳು ಕಂಡುಬರುತ್ತಿದೆ. ಕೊರೊನಾ ನಿಯಂತ್ರಣಕ್ಕೆ ದಿನರಾತ್ರಿ ಎಂಬಂತೆ ಹೋರಾಟಗಳು ನಡೆಯುತ್ತಿರುವಾಗ ಡೆಂಗ್ಯೂ ಬಗ್ಗೆಯೂ ನಿರ್ಲಕ್ಷ್ಯ ಬೇಡ ಅನ್ನುವ ಮಾತುಗಳು ಕೇಳಿಬರುತ್ತಿವೆ. ಡೆಂಗ್ಯೂ ಬಗ್ಗೆಯೂ ಕೂಡ ಸೂಕ್ತ ಮುನ್ನೆಚ್ಚರಿಕೆ ಅಗತ್ಯವಾಗಿದೆ.
2019ರಲ್ಲಿ ಡೆಂಗ್ಯೂವಿನಿಂದ 13 ಮಂದಿ ಮೃತಪಟ್ಟಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಕೊರೊನಾದಿಂದ ಜಿಲ್ಲೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಡೆಂಗ್ಯೂ ಬಗ್ಗೆ ಎಚ್ಚರವಾಗಿರುವುದು ಅಗತ್ಯವೆನಿಸುತ್ತದೆ.
ಡೆಂಗ್ಯೂ ಹರಡಲು ಪ್ರಮುಖ ಕಾರಣಗಳೇನು ಗೊತ್ತಾ..?
`ಈಡಿಸ್ ಈಜಿಪ್ಪ್ಟೆ’ ಜಾತಿಯ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ಈ ಸೊಳ್ಳೆ ಸಾಮಾನ್ಯ ಸೊಳ್ಳೆಗಿಂತಲೂ ಗಾತ್ರದಲ್ಲಿ ದೊಡ್ಡದಾಗಿದೆ. ಸಂಜೆಯ ವೇಳೆಯಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತವೆ. ಬಿಟ್ಟು ಬಿಟ್ಟು ಸುರಿಯುವ ಸಾಧಾರಣ ಮಳೆಯಿಂದ ಸೊಳ್ಳೆ ಉತ್ಪತ್ತಿಯಾಗುತ್ತದೆ. ಸರಾಗವಾಗಿ ನೀರು ಹರಿದು ಹೋಗದೆ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತದೆ. ಮನೆ ಸುತ್ತಮುತ್ತ ತುಂಬಿಸಿಟ್ಟಿರುವ ನೀರಿನಲ್ಲೂ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತದೆ. ನೀರಿನ ಟ್ಯಾಂಕ್ ಗಳಲ್ಲೂ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಡೆಂಗ್ಯೂ ಸೊಳ್ಳೆ ಶುದ್ಧ ನೀರಿನಲ್ಲೂ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಯಾಕೆ ಹೆಚ್ಚು ಪ್ರಕರಣಗಳು?
ಗ್ರಾಮಾಂತರ ಪ್ರದೇಶಗಳಲ್ಲಿರುವ ತೋಟಗಳಲ್ಲಿ, ನೀರು ತುಂಬಿಕೊಂಡಿರುವ ಕೆರೆ, ಬಾವಿಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ. ಅಲ್ಲದೆ, ತೋಟಗಳಲ್ಲಿರುವ ಕೊಳೆತ ವಸ್ತುಗಳಲ್ಲೂ ಕೂಡ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಡಿಕೆ ಮರ, ತೆಂಗಿನ ಮರದ ಗರಿಗಳಲ್ಲಿ ನೀರು ಸಂಗ್ರಹಗೊಂಡು, ತೋಟಗಳಲ್ಲಿರುವ ಕೋಕೋ ಹಣ್ಣಿನ ಚಿಪ್ಪು, ಹಾಳಾಗಿ ಬಿದ್ದಿರುವ ತೆಂಗಿನ ಕಾಯಿಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇನ್ನು ಕುಡಿದು ಎಸೆದ ಎಳನೀರು(ಬೊಂಡ)ನಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ತೆಂಗಿನಕಾಯಿ ತುರಿದು ಬೀಸಾಕಿದ ಗೆರಟೆಯಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮನೆಯ ಸುತ್ತ ಮುತ್ತ ತುಂಬಿಕೊಂಡಿರುವ ನೀರಿನಲ್ಲಿ ಸೊಳ್ಳೆಗಳ ಸಂತಾನ ವೃದ್ಧಿಯಾಗುತ್ತವೆ. ದನದ ಕೊಟ್ಟಿಗೆಗಳಲ್ಲಿ ತುಂಬಿಕೊಂಡಿರುವ ನೀರಿನಲ್ಲೂ ಸೊಳ್ಳೆ ಉತ್ಪತ್ತಿಯಾಗುತ್ತವೆ. ಅಲ್ಲದೆ, ಮನೆಯ ಸುತ್ತಮುತ್ತಲಲ್ಲಿ ಎಸೆದಿರುವ ಪ್ಲಾಸ್ಟಿಕ್ ವಸ್ತುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.
ಡೆಂಗ್ಯೂ ಮಾರಕವೇ, ಸಾವು ಗ್ಯಾರೆಂಟೀನಾ..?
ಎಸ್, ಡೆಂಗ್ಯೂ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ಸೊಳ್ಳೆ ಕಚ್ಚಿದ ಬಳಿಕ ಬಿಳಿ ರಕ್ತಕಣಗಳಿಗೆ ದಾಳಿಯಾಗುತ್ತದೆ. ವೈಟ್ ಬ್ಲಡ್ ಸೆಲ್ಸ್ ಹಾಗೂ ಪ್ಲೇಟ್ ಲೆಟ್ಸ್ ಗಳಿಗೆ ದಾಳಿಯಾಗುತ್ತದೆ. ಪರಿಣಾಮ ಬಿಳಿ ರಕ್ತಕಣಗಳ ಕೊರತೆಯಾಗಿ ರೋಗ ನಿರೋಧಕ ಶಕ್ತಿಯ ಕೊರತೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಕೊರತೆಯಾದಲ್ಲಿ ಜ್ವರ ಉಲ್ಬಣವಾಗುತ್ತದೆ. ಬಳಿಕ ವ್ಯಕ್ತಿಯನ್ನು ಗುಣಪಡಿಸುವುದು ಕಷ್ಟ ಸಾಧ್ಯ. ವ್ಯಕ್ತಿ ಮೃತನಾಗುವ ಸಾಧ್ಯತೆಯೇ ಹೆಚ್ಚು.
ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ವಿವರ ಇಲ್ಲಿದೆ ನೋಡಿ :
2016ರಲ್ಲಿ 485 ಪ್ರಕರಣಗಳು-ಒಬ್ಬರು ಮಾತ್ರವೇ ಮೃತಪಟ್ಟಿದ್ದರು
2017ರಲ್ಲಿ 136 ಪ್ರಕರಣಗಳು-ಇಬ್ಬರು ಮೃತಪಟ್ಟಿದ್ದರು
2018ರಲ್ಲಿ 584 ಪ್ರಕರಣಗಳು-ಮೂವರು ಸಾವನ್ನಪ್ಪಿದ್ದರು
2019ರಲ್ಲಿ 1539 ಪ್ರಕರಣಗಳು-13 ಮಂದಿ ಮೃತಪಟ್ಟಿದ್ದಾರೆ
2020ರಲ್ಲಿ ಈಗಾಗಲೇ 100ಕ್ಕೂ ಅಧಿಕ ಪ್ರಕರಣಗಳು-ಮೂವರು ಮೃತಪಟ್ಟಿದ್ದಾರೆ. ಇನ್ನೇನೇನಾಗುತ್ತೋ ದೇವರೇ ಬಲ್ಲ.
ಡೆಂಗ್ಯೂ ಲಕ್ಷಣಗಳು:
ತೀವ್ರ ಜ್ವರ(100 ಡಿಗ್ರಿಗೂ ಅಧಿಕ)
ಮಾಂಸಖಂಡ, ಕೀಲು ನೋವು, ಸ್ನಾಯು ಸೆಳೆತ
ವಾಂತಿ
ಕಣ್ಣಿನ ಸುತ್ತ ನೋವು
ತಲೆನೋವು
ಬಾಯಿ, ಮೂಗಿನಿಂದ ರಕ್ತ ಬರುವುದು
ಡೆಂಗ್ಯೂ ನಿಯಂತ್ರಣ ಹೇಗೆ?
- ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು.
- ಆಯಾದಿನವೇ ಸಂಗ್ರಹಿಸಿದ ನೀರನ್ನು ಖಾಲಿ ಮಾಡುವುದು.
- ದೈನಂದಿನ ಬಳಕೆಯ ನೀರಿಗೆ ಭದ್ರವಾಗಿ ಮುಚ್ಚಿಡುವುದು.
- ಸಂಗ್ರಹಿಸಿದ ನೀರಿನಲ್ಲಿ ಲಾರ್ವ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು.
- ಲಾರ್ವ-ಸೊಳ್ಳೆಯ ಆರಂಭಿಕ ಹಂತ.
ಮನೆ, ಪರಿಸರ, ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ. - ಚರಂಡಿಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ.
- ಸಾರ್ವಜನಿಕ ಪ್ರದೇಶಗಳಲ್ಲೂ ಕೂಡ ನಿರ್ಲಕ್ಷ್ಯ ಬೇಡ.
ಮನೆಯ ಸುತ್ತಮುತ್ತ ಪ್ಲಾಸ್ಟಿಕ್, ನೀರು ತುಂಬುವ ವಸ್ತುಗಳನ್ನು ಬಿಸಾಡದಿರಿ. - ಮಳೆ ನೀರು ನಿಲ್ಲುವಂತಿದ್ದರೆ, ಸರಾಗವಾಗಿ ಹರಿದು ಹೋಗುವಂತೆ ಮಾಡಿ.
- ಎಳನೀರು ಸೇವಿಸಿದ ಬಳಿಕ ಬಿಸಾಕದಿರಿ.
ತೆಂಗಿನಕಾಯಿಯ ಗೆರಟೆಗಳನ್ನು ಬಿಸಾಕದಿರಿ. - ಮನೆಯೊಳಗೆ ಸೊಳ್ಳೆಗಳು ಬರದಂತೆ ಪರದೆಗಳನ್ನು ಬಳಸಿ.
- ಬಾಗಿಲು, ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಬಳಸಿ.
ನಿದ್ರಿಸುವ ಸಂದರ್ಭದಲ್ಲೂ ಸೊಳ್ಳೆ ಪರದೆಗಳನ್ನು ಬಳಸಿಿ. - ಮನೆಯಿಂದ ಹೊರಗಡೆ ತೆರಳುವಾಗ ಮೈ ತುಂಬ ಬಟ್ಟೆ ಧರಿಸಿ.
- ತೋಟದ ಕೆಲಸಕ್ಕೆ ತೆರಳುವ ಸಂದರ್ಭ ಕೂಡ ಸೂಕ್ತ ಎಚ್ಚರಿಕೆಗಳನ್ನು ವಹಿಸಿ.
- ಸೊಳ್ಳೆಗಳು ದಾಳಿ ನಡೆಸದಂತೆ ಎಚ್ಚರ ವಹಿಸಿ.
ಸಂಜೆಯ ಸಮಯದಲ್ಲಿ ಆದಷ್ಟು ಜಾಗೃತರಾಗಿರುವುದು ಅಗತ್ಯ. - ಸಂಜೆಯ ವೇಳೆ ಡೆಂಗ್ಯೂ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ.
- ಈ ವೇಳೆ ಸೊಳ್ಳೆಗಳ ದಾಳಿಯಿಂದ ದೂರವಿರಲು ಪ್ರಯತ್ನಿಸಿ.
- ಡೆಂಗ್ಯೂ ನಿಯಂತ್ರಣಕ್ಕೆ ಆರಂಭಿಕ ಹಂತದಲ್ಲೇ ಕ್ರಮಕೈಗೊಳ್ಳಿ.
- ಆರೋಗ್ಯ ಇಲಾಖೆ, ಸರಕಾರದಷ್ಟೇ ಜವಾಬ್ದಾರಿ ಸಾರ್ವಜನಿಕರಲ್ಲೂ ಇದೆ.
- ಸಾರ್ವಜನಿಕರು ರೋಗ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.
- ಕೊರೊನಾ ಸಂದರ್ಭದಲ್ಲಿ ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ.