Sunday, January 19, 2025
ಸುದ್ದಿ

ಹುಬ್ಬಳ್ಳಿಯಲ್ಲಿ ಹಿಂದೂ ಸಂಪ್ರದಾಯದಂತೆ ಮಗಳ ಮುಡಿ ತೆಗೆಸಿದ ಮುಸ್ಲಿಂ ದಂಪತಿ-ಕಹಳೆ ನ್ಯೂಸ್

ಹುಬ್ಬಳ್ಳಿ(ಜೂ.26): ಹಿಂದೂ ಧರ್ಮದ ಸಂಪ್ರದಾಯದಂತೆ ಮಕ್ಕಳ ಜವಳ ಅಥವಾ ಮುಡಿ ತೆಗೆಯುವುದು ಸರ್ವೇ ಸಾಮಾನ್ಯ. ಮಗುವಿನ ಕೂದಲನ್ನು ಮೊದಲ ಬಾರಿಗೆ ಕತ್ತರಿಸುವಾಗ ಜವಳ ತೆಗೆಯುವ ಸಂಪ್ರದಾಯ ನೆರವೇರುತ್ತದೆ. ಮಗುವಿನ ತಂದೆ- ತಾಯಿ ಮತ್ತು ಸೋದರ ಮಾವನ ಉಪಸ್ಥಿತಿಯಲ್ಲಿ ಜವಳ ತೆಗೆಯಲಾಗುತ್ತದೆ. ಧಾರ್ಮಿಕ ಕೇಂದ್ರಗಳಲ್ಲಿ ಜವಳ ತೆಗೆಯುವುದು ಹಿಂದೂಗಳ ಸಂಪ್ರದಾಯಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಆದರೆ ಮುಸ್ಲಿಂ ಸಮುದಾಯದಲ್ಲಿ ಜವಳ ತೆಗೆಯುವ ಸಂಪ್ರದಾಯವಿಲ್ಲ. ಮುಸ್ಲಿಂ ಕುಟುಂಬವೊಂದು ಮಸೀದಿಯಲ್ಲಿ ಮಗುವಿನ ಜವಳ ತೆಗೆಸುವ ಮೂಲಕ ವಿಶೇಷತೆ ಮೆರೆದಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕನರ್ತಿ ಗ್ರಾಮದ ಲಾಲಸಾಬ್‌ ನದಾಫ್ ಹಾಗೂ ಅಮೀನಾ ನದಾಫ್ ದಂಪತಿಗಳು ತಮ್ಮ ಮಗಳಿಗೆ ಜವಳ ತೆಗೆಯುವ ಸಂಪ್ರದಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆರು ತಿಂಗಳ ಮಗು ಆರೀಫ್‌ಗೆ‌ ಜವಳ ತೆಗೆಸುವ ಕಾರ್ಯಕ್ರಮವನ್ನು ಮಸೀದಿಯಲ್ಲಿ ಮಾಡಿದ್ದಾರೆ. ಹಿಂದೂ- ಮುಸ್ಲಿಂ‌ ಭಾವೈಕ್ಯತೆಯೊಂದಿಗೆ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಿಗೆ ಬಾಲ್ಯದಿಂದಲೇ ಸಹಬಾಳ್ವೆಯ ಪಾಠ ಹೇಳಿಕೊಡಬೇಕು ಎನ್ನುವುದು ನದಾಫ್ ದಂಪತಿಯ ಇಚ್ಛೆ. ಗ್ರಾಮೀಣ ಜೀವನ ಸದಾ ಸಮನ್ವಯತೆಯಿಂದ ಕೂಡಿದೆ. ಯಾವುದೇ ಒಂದು ಜಾತಿ ಧರ್ಮದ ಕಟ್ಟಳೆಗೆ ಸೀಮಿತವಾಗಿಲ್ಲ. ಎಲ್ಲರೂ ಸರ್ವಧರ್ಮದ ಆಚರಣೆಗಳನ್ನು ಗೌರವಿಸಬೇಕು. ಪರಸ್ಪರರ ಸಂಪ್ರದಾಯಗಳನ್ನು ಪಾಲಿಸಬೇಕು ಎಂಬುವ ಸದುದ್ದೇಶದಿಂದ ದಂಪತಿಗಳು ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ.

ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ವೀಳ್ಯದೆಲೆಯನ್ನು ತಲೆಗೆ ಮುಟ್ಟಿಸಿ ಬಳಿಕ ಜವಳ ತೆಗೆಯಲಾಯಿತು. ಚಿಕ್ಕನರ್ತಿ ಗ್ರಾಮಸ್ಥರು ಸಂತೋಷದಿಂದ ಒಟ್ಟುಗೂಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನದಾಫ್ ದಂಪತಿ ಹಾಗೂ ಹಳ್ಳಿಯ ಜನರ ಜಾತ್ಯಾತೀತ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.