Recent Posts

Friday, November 22, 2024
ಆರೋಗ್ಯಸುದ್ದಿ

ರಾಜ್ಯದಲ್ಲಿ ಆಯುರ್ವೇದ ಔಷಧಿ ಮೊದಲ ಕ್ಲಿನಿಕಲ್ ಟ್ರಯಲ್ ಯಶಸ್ವಿ, 2ನೇ ಹಂತಕ್ಕೆ ಪ್ರಸ್ತಾವನೆ-ಕಹಳೆ ನ್ಯೂಸ್

ಬೆಂಗಳೂರು,ಜೂ.23- ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ರಾಜ್ಯದ ಮೊದಲ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‍ಗೆ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ಪ್ರಯೋಗಕ್ಕೆ ಡಾ. ಗಿರಿಧರ್ ಕಜೆ ಅವರು ಏಪ್ರಿಲ್‍ನಲ್ಲಿ ಸರ್ಕಾರಕ್ಕೆ ಅನುಮತಿ ಕೋರಿದ್ದರು. ಅಗತ್ಯ ದಾಖಲೆಗಳನ್ನು ಒದಗಿಸಿ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದ ಬಗ್ಗೆ ವಿವರಿಸಿದ ಅವರು, ಅದು ಯಾವ ರೀತಿ ಕೆಲಸ ಮಾಡಲಿದೆ ಎನ್ನುವ ವಿಸ್ತೃತ ವರದಿ ನೀಡಿದ್ದರು. ಅದಾದ ಬಳಿಕ ಸರ್ಕಾರ ಅಧಿಕೃತವಾಗಿ ಕ್ಲಿನಿಕಲ್ ಟ್ರಯಲ್‍ಗೆ ಅನುಮತಿ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ರೀತಿಯ ಆಯುರ್ವೇದ ಮಾತ್ರೆಗಳನ್ನು ಕೊರೊನಾ ಸೋಂಕಿಗೆ ಸಿದ್ದಪಡಿಸಿದ್ದು, ಅದನ್ನು 10 ಸೋಂಕಿತರಿಗೆ ನೀಡಲಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರೂ ಸೇರಿ 10 ಜನ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಸಫಲ ಆಗುತ್ತಿದ್ದಂತೆ ಮುಂದಿನ ಪ್ರಯೋಗಕ್ಕೆ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಅವರು ಮುಂದಾಗಿದ್ದಾರೆ. ಅದಕ್ಕಾಗಿ ಸರ್ಕಾರದ ಮುಂದೆ ಮತ್ತೊಂದು ಪ್ರಸ್ತಾವನೆ ಇಟ್ಟಿದ್ದಾರೆ. ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

# ಏನಿದು ಪ್ರಸ್ತಾವನೆ?

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡಲು ಮನವಿ ಮಾಡಿದ್ದಾರೆ. ಯಾವುದೇ ರೀತಿಯ ಅಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೂ ಆಯುರ್ವೇದ ಔಷಧಿ ಯಾವುದೇ ವಿಧದ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ.

ಹೀಗಾಗಿ, ಸೋಂಕಿತರಿಗೆ ಈ ಔಷಧಿ ಕೊಟ್ಟರೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗಲ್ಲ. ರೋಗಿಗಳ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜ್ವರ ಸೇರಿ ಇತರೆ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಹೆಚ್ಚಿನ ಸೋಂಕಿತರಿಗೆ ಆಯುರ್ವೇದ ಮಾತ್ರೆಗಳು ನೀಡಲು ಅನುಮತಿ ಕೋರಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಡಾ.ಗಿರಿಧರ್ ಕಜೆ ಅವರು ಸೋಂಕಿತರ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಿಗೆ ಈ ಮಾತ್ರೆ ನೀಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದ ಮೊದಲ ದಿನದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದು ಮೂರುನಾಲ್ಕು ದಿನಗಳ ಬಳಿಕ ಪಾಸಿಟಿವ್ ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ.

ಇವರಿಗೆ ಆಯುರ್ವೇದ ಮಾತ್ರೆ ಕೊಟ್ಟರೆ ಅವರಿಗೆ ಧನಾತ್ಮಕ ಪರಿಣಾಮ ಬೀರಲಿದ್ದು, ಪಾಸಿಟಿವ್ ಆಗುವ ಸಾಧ್ಯತೆ ಕಡಿಮೆ ಎನ್ನುವ ವಾದ ಸರ್ಕಾರದ ಮುಂದಿಟ್ಟಿದ್ದಾರೆ.

ಸಂಪರ್ಕಿತರ ಜೊತೆಗಿನ ಎಲ್ಲಾ ಸಕ್ರಿಯ ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೂ ಆಯುರ್ವೇದ ಔಷಧ ನೀಡಿದರೆ ಪರಿಣಾಮಕಾರಿ ಫಲಿತಾಂಶ ಹೊರಬರಲಿದೆ. ಆಯುರ್ವೇದ ಮಾತ್ರೆಯಿಂದ ಅಡ್ಡ ಪರಿಣಾಮ ಇಲ್ಲ. ಅಲೋಪತಿ ಔಷಧಿ ಜೊತೆ ಯಾವುದೇ ತೊಂದರೆ ಆಗುವುದಿಲ್ಲ. ಹೀಗಾಗಿ, ಈ ಪ್ರಯೋಗಕ್ಕೆ ಅವಕಾಶ ನೀಡಿದರೆ ಅದಕ್ಕೆ ತಾವು ಸಿದ್ಧ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಹ ಸರ್ಕಾರಕ್ಕೆ ನೀಡಿದ್ದಾರೆ.

ಇಂದು 23,841 ಪ್ರಾಥಮಿಕ ಸಂಪರ್ಕಿತರು, 21,109 ದ್ವಿತೀಯ ಸಂಪರ್ಕಿತರು ಸೇರಿ 44,950 ಜನ ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ. 9,406 ಕೊರೊನಾ ಸಕ್ರೀಯ ಪ್ರಕರಣಗಳಿವೆ. ಒಟ್ಟು ಎಲ್ಲಾ ಸೇರಿ 54,356 ಜನ ಆಗಲಿದ್ದು, ಎಲ್ಲರಿಗೂ ಕೊರೊನಾಗಾಗಿ ತಯಾರಿಸಿರುವ ಆಯುರ್ವೇದ ಮಾತ್ರೆಗಳನ್ನು ನೀಡಲು ಸಮರ್ಥರಾಗಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ಕೊರೊನಾ ಸೋಂಕಿತರ ಮೇಲಿನ ಆಯುರ್ವೇದ ಕ್ಲಿನಿಕಲ್ ಟ್ರಯಲ್ ಯಶಸ್ವಿ ಆಗಿರುವುದಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಹರ್ಷ ವ್ಯಕ್ತಪಡಿಸಿದ್ದಾರೆ. 100-200 ಸೋಂಕಿತರಿಗೆ ಆಯುರ್ವೇದ ಮಾತ್ರೆ ನೀಡಲು ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ.

ಜೊತೆಗೆ ಕೇರಳ ಮಾದರಿಯ ಆಯುರ್ವೇದ ಬಳಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಗಿರಿಧರ್ ಕಜೆ ಅವರ ಪ್ರಸ್ತಾವನೆಯನ್ನು ಸರ್ಕಾರ ಯಾವ ರೀತಿ ಪರಿಗಣಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.