ಬಣ್ಣ ಬಣ್ಣದ ಲೋಕದಲ್ಲಿ ಚಿತ್ತಾರವನ್ನು ಮೂಡಿಸುತ್ತಿರುವ ಹುಡುಗಿ ; ಟಿವಿ ನಿರೂಪಕಿಯಿಂದ ಧಾರಾವಾಹಿ, ಬೆಳ್ಳಿತೆರೆಯವರೆಗೆ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿ, ಕಾರ್ಯಕ್ರಮಗಳನ್ನು ನಿರೂಪಿಸಿ ಜನರ ಮನಸ್ಸನ್ನು ಗೆದ್ದ ಬೆಡಗಿ ನಯನಾ ರಾಜ್ – ಕಹಳೆ ನ್ಯೂಸ್
ಎಸ್, ಹೌದು ಕಂಡ್ರೀ, ಬಣ್ಣ ಬಣ್ಣದ ಲೋಕದಲ್ಲಿ ಚಿತ್ತಾರವನ್ನು ಮೂಡಿಸುತ್ತಿರುವ ಹುಡುಗಿ. ಬಾಯಿ ತೆರೆದ್ರೆ ಸಾಕು, ಪಟಪಟನೆ ಮಾತಾಡೋ ಚಾಲಾಕಿ. ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿ ಜನರ ಮನಸ್ಸನ್ನು ಗೆದ್ದ ಬೆಡಗಿ ನಯನಾ ರಾಜ್.
ಈಕೆ ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿಯವರು. ಬಸವರಾಜ ಹಾಗೂ ಕಮಲ ದಂಪತಿಯ ಪುತ್ರಿ. ಬೆಂಗಳೂರಿನಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿ, 2016 ರಲ್ಲಿ ಮೊದಲ ಬಾರಿಗೆ ನಟನಾ ಲೋಕಕ್ಕೆ ಕಾಲಿರಿಸಿದ ಈಕೆ, ನಟನೆ ಅಂತ ಬಂದ್ರೆ ಯಾವ ಪಾತ್ರಕ್ಕೂ ಸೈ ಎನಿಸುವ ಲುಕ್ ಈಕೆಯದು. “ಬೆಲ್ ಬಾಟಮ್” ಚಿತ್ರದ ನಿರ್ದೇಶಕರಾದ ಜೈ ತೀಥ೯ ಇವರ “ಬನಾರಸ್” ಎನ್ನುವ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇಮಗಲ್ ಜಗನ್ನಾಥರವರ “ಆವತ೯” ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದೀಗ ಕನ್ನಡ ಮಾತ್ರವಲ್ಲದೆ ತೆಲುಗಿನ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ “ಶ್ರೀಮತಿ” ಧಾರವಾಹಿಯಲ್ಲಿ ನಾಯಕಿಯ ಪಾತ್ರವನ್ನು ನಿವ೯ಹಿಸುತ್ತಿದ್ದಾರೆ.
ಈಕೆ 2019 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ “ಚಿತ್ರ ಸಂತೆ ಫಿಲ್ಮ್ ಫೇರ್ ಅವಾರ್ಡ್ 2019” ರ ಕಾರ್ಯಕ್ರಮದ ನಿರೂಪಕಿಯಾಗಿ ಕೂಡ ಮಿಂಚಿದ್ದಾರೆ. ಉದಯ ಟಿವಿ, ಸರಳ ಜೀವನ, ಚಂದನ ಟಿವಿ ಹೀಗೆ ಹಲವಾರು ಟಿವಿ ಚಾನೆಲ್ ಗಳಲ್ಲಿ, ಇತರ ಖಾಸಗಿ ಚಾನೆಲ್ ಗಳಲ್ಲಿ 30 ಕ್ಕೂ ಹೆಚ್ಚು ಸ್ಟೇಜ್ ಶೋಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದಿದ್ದಾರೆ.
ಮಾಡೆಲಿಂಗ್ ನಲ್ಲಿಯೂ ಸಾಧನೆಯನ್ನು ಮಾಡುತ್ತಿರುವ ಈಕೆ, 2017 ರಲ್ಲಿ “ಇಂಟರ್ನ್ಯಾಷನಲ್ ಮಿಸ್ ಬ್ಯೂಟಿಫುಲ್ 2017” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ಅಂತೆಯೇ 16 ಕ್ಕೂ ಹೆಚ್ಚು ಸ್ಟೇಜ್ ಶೋಗಳನ್ನು ನೀಡುತ್ತಾ ಬಂದಿರುತ್ತಾರೆ.
ಇಷ್ಟೇ ಅಲ್ಲದೇ, ಈಕೆ ಉತ್ತಮ ನೃತ್ಯಗಾರ್ತಿ ಕೂಡ ಹೌದು. ಶಾಸ್ತ್ರೀಯ ನೃತ್ಯ, ಹಿಪ್ ಹಾಪ್, ಹಾಗೇ ಪಾಶ್ಚಾತ್ಯ ನೃತ್ಯ (ವೆಸ್ಟರ್ನ್ ಡ್ಯಾನ್ಸ್),ಗಳಲ್ಲೂ ಛಾಪು ಮೂಡಿಸಿರುವ ಈಕೆ, ತನ್ನ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡುತ್ತಾರೆ.
ನಟನೆ, ಮಾತಿನಿಂದಲೇ ಜನರ ಮನಸ್ಸನ್ನು ಗೆದ್ದಿರುವ ನಯನಾ ಇವರು, ” ನನ್ನ ತಂದೆ ತಾಯಿ ನನ್ನೆಲ್ಲ ಕನಸುಗಳಿಗೆ ಸ್ಪೂರ್ತಿ. ಇನ್ನೂ ಉತ್ತಮ ಚಿತ್ರವನ್ನು ತರುವಲ್ಲಿ ಖಂಡಿತ ಶ್ರಮಿಸುತ್ತೇನೆ. ಉತ್ತಮ ನಟಿಯಾಗಬೇಕೆಂಬ ಆಸೆ ನನ್ನದು” ಎಂದು ಹೇಳುತ್ತಾರೆ. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು , ಬೇರೆ ಭಾಷೆಯಲ್ಲಿಯೂ ಮಿಂಚುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲೇಬೇಕೆಂಬ ಹಂಬಲ ಈಕೆಯದು. ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕೆಂದು ಇವರ ದೊಡ್ಡ ಕನಸು. ಇವರ ಈ ಕನಸೆಲ್ಲ ನನಸಾಗಲೆಂದು ನಮ್ಮದೊಂದು ಪುಟ್ಟ ಹಾರೈಕೆ.
ಲೇಖನ : ತನುಶ್ರೀ ಬೆಳ್ಳಾರೆ