ಮಂಗಳೂರು: ಇಲ್ಲಿನ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ಮನೆಮೇಲೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಮೃತಪಟ್ಟ ಮಕ್ಕಳನ್ನು ಸಫ್ವಾನ್ (16 ವ) ಮತ್ತು ಸಹಲಾ ( 10 ವ) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಂಗ್ಲೆಗುಡ್ಡೆ ಎಂಬಲ್ಲಿ ರವಿವಾರ ಭಾರಿ ಮಳೆಯ ಕಾರಣ ಗುಡ್ಡ ಕುಸಿತ ಸಂಭವಿಸಿತ್ತು. ಇದಿರಂದ ನಾಲ್ಕು ಮನೆಗಳು ನೆಲಸಮವಾಗಿತ್ತು. ಘಟನೆಯಲ್ಲಿ ಇಬ್ಬರು ಮಣ್ಣಿನಲ್ಲಿ ಸಿಲುಕಿ, ಮೃತಪಟ್ಟಿದ್ದಾರೆ.
ಈ ಬಂಗ್ಲೆಗುಡ್ಡೆ ಪ್ರದೇಶದಲ್ಲಿ 20 ವರ್ಷಗಳ ಹಿಂದೆ ಜಿಲ್ಲಾಡಳಿತ 14 ನಿರಾಶ್ರಿತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿತ್ತು. ಇವರೆಲ್ಲ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಇಂದು ಭಾರಿ ಮಳೆಯ ಕಾರಣದಿಂದ ಗುಡ್ಡದ ಮಣ್ಣು ಜರಿದು, ಮರಗಳ ಸಹಿತ ಬಿದ್ದಿದೆ. ಹೀಗಾಗಿ ನಾಲ್ಕು ಮನೆಗಳು ನೆಲಸಮವಾಗಿದೆ. ಇನ್ನೂ ಎಂಟು ಮನೆಗಳು ಅಪಾಯದಲ್ಲಿದೆ ಎನ್ನಲಾಗಿದೆ.
ಮಣ್ಣಿನಡಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆಯಲು ಜಿಲ್ಲಾಡಳಿತ, ಎನ್ ಡಿಆರ್ ಎಫ್ ತಂಡ ಕಾರ್ಯಚರಣೆ ನಡೆಸುತ್ತಿತ್ತು. ಆದರೆ ಭಾರಿ ಮಣ್ಣಿನಡಿ ಸಿಲುಕಿದ್ದ ಮಕ್ಕಳನ್ನು ಜೀವಂತವಾಗಿ ಹೊರತೆಗೆಯಲು ಸಾಧ್ಯವಾಗಿಲ್ಲ.
ಮಂಗಳುರು ಸಂಸದ ನಳೀನ್ ಕುಮಾರ್ ಕಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಎಲ್ಲಾ ನಿರಾಶ್ರಿತ ಕುಟುಂಬಗಳಿಗೂ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.