ಗುರುಪುರದಲ್ಲಿ ಗುಡ್ಡ ಕುಸಿದು ಮಕ್ಕಳು ಮೃತ್ಯು ; ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಯಡಿಯೂರಪ್ಪ – ಕಹಳೆ ನ್ಯೂಸ್
ಬೆಂಗಳೂರು, ಜು. 05 : ದ.ಕ. ಜಿಲ್ಲೆಯ ಮಂಗಳೂರು ಹೊರವಲಯದ ಗುರುಪುರ ಬಂಗ್ಲಗುಡ್ಡೆಯಲ್ಲಿ ರವಿವಾರದಂದು ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಾಂತ್ವನ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ, ಈ ಪ್ರದೇಶದಲ್ಲಿ ಸಿಲುಕಿಕೊಂಡಿರುವವರನ್ನು ಸುರಕ್ಷಿತ ಸ್ಥಳಾಗಳಿಗೆ ಸ್ಥಳಾಂತರ ಮಾಡುವಂತೆಯೂ ಸೂಚನೆ ನೀಡಿದ್ದಾರೆ.
ಇನ್ನು ಈಗಾಗಲೇ 19 ಮನೆಗಳಿಂದ 118 ಮಂದಿಯನ್ನು ತೆರವುಗೊಳಿಸಿ ಸೂಕ್ತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಉಳಿದಂತೆ 60 ಮನೆಗಳಲ್ಲಿರುವ ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲಾಗಿದೆ. ಬೋಂಡಂತಿಲ ಗ್ರಾಮದ ಬಳಿ ಗುರುತಿಸಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಎಲ್ಲಾ ಸಂತ್ರಸ್ತರನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಇನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದಾರೆ. ಜಿಲ್ಲಾಡಳಿತದ ಸಕಲ ಪ್ರಯತ್ನದ ಹೊರತಾಗಿಯೂ ಮಕ್ಕಳನ್ನು ರಕ್ಷಿಸಲು ಅಸಾಧ್ಯವಾಗಿದ್ದು, ಇದಕ್ಕೆ ಸಿಎಂ ವಿಷಾಧ ವ್ಯಕ್ತಪಡಿಸಿದ್ದಾರೆ.