Sunday, January 19, 2025
ಜಿಲ್ಲೆಸುದ್ದಿ

ಅಡಿಕೆ ಮರ ರೋಗಗಳಿಗೆ ಔಷಧಿ ಸಿಂಪಡಿಸುವುದು ಅಗತ್ಯ: ತೋಟಗಾರಿಕೆ ಇಲಾಖೆ-ಕಹಳೆ ನ್ಯೂಸ್

ಮಂಗಳೂರು,ಜು.08(ಹಿ.ಸ): ಅಡಿಕೆ ಎಲೆ ಚುಕ್ಕೆ ರೋಗವು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಶಿಲೀಂದ್ರ ರೋಗವಾಗಿದ್ದು, ಎಲೆಗಳ ಮೇಲೆ ತೇವಾಂಶ ಇದ್ದಾಗ ಈ ರೋಗ ಕಂಡು ಬರುತ್ತದೆ. ಮೊದಲು ತಳಭಾಗದ ಎಲೆಗಳ ಮೇಲೆ ಕಂದುಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಕಂಡು ಬಂದು ನಂತರ ಒಂದು ರೂಪಾಯಿ ನಾಣ್ಯದಷ್ಟು ಅಗಲವಾಗುತ್ತದೆ.

ನಂತರ ಇಡೀ ಎಲೆಗಳಿಗೆ ಹರಡಿ ಎಲೆಗಳು ಒಣಗುತ್ತವೆ. ಇದರಿಂದ ಆಹಾರ ತಯಾರಿಕೆ ಕಡಿಮೆಯಾಗಿ ಅಡಿಕೆ ಕಾಯಿ ಗಾತ್ರ, ಗುಣಮಟ್ಟ ಮತ್ತು ಇಳುವರಿ ಕಡಿಮೆಯಾಗುತ್ತದೆ. ರೋಗ ಹೆಚ್ಚಾಗಿ ತಳಭಾಗದ 4 ರಿಂದ 5 ಸೋಗೆಗಳು ಒಣಗುತ್ತವೆ. ಇದರಿಂದ ಶೇ.50 ರಷ್ಟು ಇಳುವರಿ ಕಡಿಮೆಯಾಗುತ್ತದೆ. ರೋಗದ ನಿರ್ವಹಣೆಗೆ; ರೋಗ ಪೀಡಿತ ಸತ್ತ ಎಲೆಗಳನ್ನು ತೆಗೆದು ಸುಡುವುದು. 2) ತೋಟದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು. 3) 3 ಗ್ರಾಂ. ಕಾಪರ್ ಆಕ್ಸಿಕ್ಲೋರೈಡ್ ಅಥವಾ ಶೇ.1ರ ಬೋರ್ಡೋದ್ರಾವಣವನ್ನು ಸಿಂಪಡಿಸುವುದು. ಅಡಿಕೆ ಕೊಳೆರೋಗಳು ಜೂನ್‍ನಿಂದ ಸೆಪ್ಟೆಂಬರ್ ತಿಂಗಳವರೆಗೆ ಕಾಣಿಸಿಕೊಳ್ಳುವುದರಿಂದ ಬೆಳೆಯಲ್ಲಿ ಹೆಚ್ಚಿನ ನಷ್ಟವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಕೊಳೆರೋಗ ಬಂದ ತೋಟಗಳಲ್ಲಿ ರೋಗಾಣು ಸುಪ್ತಾವಸ್ಥೆಯಲ್ಲಿದ್ದು, ಈಗ ಪೂರಕ ವಾತಾವರಣ ಇರುವುದರಿಂದ ಒಮ್ಮೆಲೆ ತೀವ್ರವಾಗುತ್ತದೆ. ಈ ರೋಗವು ಗಾಳಿ ಮುಖಾಂತರ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ. ನಿರ್ವಹಣೆ ಕ್ರಮ: ಶೇ. 1 ರ ಬೋರ್ಡೋದ್ರಾವಣ ಸಿಂಪರಣೆಯನ್ನು ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ಮತ್ತು 30 ರಿಂದ 45 ದಿನಗಳ ನಂತರ ಇನ್ನೊಮ್ಮೆ ಸಿಂಪಡಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ರೈತರು ಮಳೆ ಬಿಡುವಿದ್ದಾಗ 2 ನೇ ಹಂತದ ಬೋಡೋದ್ರಾವಣ ಸಿಂಪರಣೆಯನ್ನು ಕೈಗೊಳ್ಳಲು ಈಗ ಸೂಕ್ತ ಕಾಲವಾಗಿದೆ. ಕಾಳುಮೆಣಸು ಸೊರಗು ರೋಗಗಳು ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಈ ಸೊರಗು ರೋಗ ನಿಯಂತ್ರಿಸಲು ಶೇ. 1 ರ ಬೋರ್ಡೋದ್ರಾವಣವನ್ನು ಬಳ್ಳಿಗಳ ಎಲ್ಲಾ ಎಲೆಗಳಿಗೆ ಬೀಳುವಂತೆ ಸೂಕ್ಷ್ಮವಾಗಿ ಸಿಂಪಡಿಸಿದ ನಂತರ ಅದೇ ದ್ರಾವಣವನ್ನು ಬಳ್ಳಿಗಳ ಬುಡಕ್ಕೂ ಸಿಂಪಡಿಸಬೇಕು.

ಈ ಸಿಂಪರಣೆಯನ್ನು 30-40 ದಿನಗಳ ಅಂತರದಲ್ಲಿ ಪುನಾರವರ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8277806372 ಅಥವಾ ಮಂಗಳೂರು ತೋಟಗಾರಿಕೆ ವಿಷಯ ತಜ್ಞರು, ರಿಶಲ್ ಡಿಸೋಜ ಅವರನ್ನು ಸಂಪರ್ಕಿಸುವಂತೆ ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.