ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರಸೇವಕ ; ಪೈ ಟ್ರೇಡರ್ಸ್ ನ ಮಾಲಕ ಹರೀಶ್ ಪೈ ನಿಧನ – ಕಹಳೆ ನ್ಯೂಸ್
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರ ಪ್ರಮುಖ್ ಆಗಿ ಚಿರಪರಿಚಿತಗೊಂಡಿರುವ ಇಲ್ಲಿನ ಸಿಪಿಸಿ ಪ್ಲಾಝಾದಲ್ಲಿರುವ ಪೈ ಟ್ರೇಡರ್‍ಸ್‌ನ ಮಾಲಕ ಹರೀಶ್ ಪೈ(52ವ)ರವರು ಜು.14ರ ನಸುಕಿನ ಜಾವ ಮೃತಪಟ್ಟಿದ್ದಾರೆ.
ಜು.೧೨ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರೊಂದಿಗೆ ಆದಿತ್ಯವಾರದ ಸ್ವಚ್ಛತಾ ಕಾರ್ಯವನ್ನು ಮುಗಿಸಿ ಮಧ್ಯಾಹ್ನ ದೇವಳದ ಹೊರಾಂಗಣದ ಗೋಪುರದಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದು ತಕ್ಷಣ ಅವರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಅವರನ್ನು ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಜು.14ರ ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್್ದದಾರೆ.
ದೇವಳದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುವ ಸಂದರ್ಭ ರಾಜೇಶ್ ಬನ್ನೂರು ಅವರು ಕರಸೇವಾ ಕೇಂದ್ರದ ಪ್ರಮುಖ್ ಆಗಿದ್ದು, ಈ ಸಂದರ್ಭ ಹರೀಶ್ ಪೈ ಅವರು ಪ್ರತಿ ದಿನ ರಾತ್ರಿ ಮುಖ್ಯ ಕರಸೇವಕರಾಗಿ ಗುರುತಿಸಿಕೊಂಡಿದ್ದರು. ಇದೇ ಸಂದರ್ಭ ಅವರೊಂದಿಗೆ ನಿತ್ಯ ಕರಸೇವಕರ ತಂಡವೊಂದು ಹುಟ್ಟಿಕೊಂಡಿತು. ಈ ತಂಡ ಮುಂದೆ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್ ಅವರ ಮಾರ್ಗದರ್ಶನದಲ್ಲಿ ಹರೀಶ್ ಪೈ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ಸೇರಿದಂತೆ ಜೀರ್ಣೋದ್ದಾರ ಕಾರ್ಯದಲ್ಲೂ ಭಾಗಿಯಾಗಿವುದರ ಮೂಲಕ ಚಿರಪರಿಚಿತಗೊಂಡಿದ್ದರು.