ಜ್ಞಾನ ಪ್ರಸಾರದ ಕಾರ್ಯ ಸರ್ವೋಕ್ಕೃಷ್ಟವಾದದ್ದು. ಕೆಲವೊಮ್ಮೆ ಸಮಸ್ಯೆಗಳಿಂದ ಸಾಮರ್ಥ್ಯ ಹುಟ್ಟಿಕೊಳ್ಳುತ್ತದೆ;
ಸದವಕಾಶಗಳು ಮೂಡಿ ಬರುತ್ತವೆ. ಪುಸ್ತಕದಿಂದ ಮಸ್ತಕಕ್ಕೆ, ಮಸ್ತಕದಿಂದ ಜಗತ್ತಿಗೆ ಜ್ಞಾನ ಪ್ರಸರಿಸುವ ಕೈಂಕರ್ಯವನ್ನು ನಿಸ್ವಾರ್ಥಭಾವದಿಂದ ಚೈನೀ ಆಪ್‍ಗಳ ಸಹಾಯವಿಲ್ಲದೆ ಸ್ವಂತ ವೆಬ್‍ಸೈಟಿನಿಂದ ಸ್ವದೇಶಿ ಆಂದೋಲನಕ್ಕೆ ಒತ್ತುಕೊಟ್ಟು ಅಂಬಿಕಾ ಸಂಸ್ಥೆ ಪ್ರಾರಂಭಿಸಿರುವುದು ಹೆಮ್ಮೆಯ ಹಾಗೂ ಎಲ್ಲರಿಗೂ ಪ್ರೇರಣೆಯ ವಿಚಾರ.
ಅನೇಕ ಪ್ರಥಮಗಳಿಗೆ ಪ್ರಥಮವಾಗಿರುವ ಸಂಸ್ಥೆಯ ಈ ಕಾರ್ಯ ವಿದ್ಯಾರ್ಥಿಗಳ ಉತ್ತರೋತ್ತರ ಯಶಸ್ಸಿಗೆ ಕಾರಣವಾಗಲಿ ಎಂದು ಕಾರ್ಯಕ್ರಮದ ಉದ್ಘಾಟಕರಾದ ಪುತ್ತೂರಿನ ಖ್ಯಾತ ಅಭಿಯಂತರರಾದ ಶ್ರೀ ಎಸ್.ಕೆ.ಆನಂದರು ಸಂಸ್ಥೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು. ಶ್ರೀಯುತರು ತಮ್ಮ ದಿವ್ಯ ಹಸ್ತದಿಂದ ವಿಧ್ಯುಕ್ತವಾಗಿ ದೀಪ ಬೆಳಗಿಸಿ ನೇರ ಪ್ರಸಾರ ಶಿಕ್ಷಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಕೊರೊನಾದಿಂದ ಕಂಗೆಟ್ಟ ಸಮಾಜದಲ್ಲಿ ಕೊರೊನಾದ ಜೊತೆಗೆ ಬದುಕು ಸಾಗಿಸಬೇಕಾದ ಪ್ರಸಂಗ ಬಂದಿದೆ.ಅಭಿವೃದ್ಧಿಗೆ ಬದಲಾವಣೆಗಳ ಅಗತ್ಯವಿದೆ. ಆದುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸ್ವಂತ ವೆಬ್‍ಸೈಟ್‍ನಿಂದ ಸ್ವದೇಶಿ ಆಂದೋಲನದೊಂದಿಗೆ ಪ್ರಥಮ ಪಿಯುಸಿ ಶೈಕ್ಷಣಿಕ ಅವಧಿಯನ್ನು ಪ್ರಾರಂಭಿಸಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಕಾರ್ಯ ಚಟುವಟಿಕೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಈ ಕೈಂಕರ್ಯವನ್ನು ಪ್ರಾರಂಭಿಸುತ್ತೇವೆ ಎಂದು ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ಶ್ರೀಮತಿ ರಾಜಶ್ರೀ ಎಸ್ ನಟ್ಟೋಜ, ನಿರ್ದೇಶಕ ಸುರೇಶ್ ಶೆಟ್ಟಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಸುಚಿತ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು.