ಬೆಂಗಳೂರು : ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದೆ. ನಿಗದಿತ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಾಗುತ್ತಿದ್ದು, ರಿಸಲ್ಟ್ ಪಡೆಯಬಹುದಾಗಿದೆ. ಸುಮಾರು 6 ಲಕ್ಷದ 75 ಸಾವಿರದ 277 ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. ಈ ಬಾರಿ ಶೇ. 61.80 ಫಲಿತಾಂಶ ಬಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ದ್ವಿತೀಯ ಪಿಯು ಫಲಿತಾಂಶದ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು. ಕೊರೊನಾ ಸೋಂಕು ವ್ಯಾಪಕವಾಗಿ ಹರಡದಿ ಹಿನ್ನಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆ ಹಾಗೂ ಮೌಲ್ಯ ಮಾಪನ ಸವಾಲಾಗಿತ್ತು. ಕೊರೊನಾ ಹಿನ್ನಲೆಯಲ್ಲಿ ಬಾಕಿ ಉಳಿದಿದ್ದ ಇಂಗ್ಲಿಷ್ ಭಾಷೆಯ ಪರೀಕ್ಷೆಯನ್ನು ಜೂ.19 ರಂದು ನಡೆಸಲಾಗಿತ್ತು. ಈ ಬಾರಿಯ ಮೌಲ್ಯಮಾಪನ ಕಾರ್ಯದಲ್ಲಿ 11,970 ಉಪನ್ಯಾಸಕರು ಪಾಲ್ಗೊಂಡಿದ್ದಾರೆ. ಈ ಬಾರಿ ಪರೀಕ್ಷೆಗೆ 6 ಲಕ್ಷದ 75 ಸಾವಿರದ 277 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ಪೈಕಿ 5,56,267 ಮಂದಿ ಫ್ರೆಶರ್ಸ್ ಆಗಿದ್ದು, ಈ ಪೈಕಿ 3,84,847 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 61.80 ಫಲಿತಾಂಶ ಬಂದಿದೆ. ಕಳೆದ ವರ್ಷ ಈ ಪ್ರಮಾಣ ಶೇ. 68.08 ಇತ್ತು. ಇನ್ನು ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 91,025 ಇದ್ದು, ಈ ಪೈಕಿ 25,602 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು ಖಾಸಗಿಯಾಗಿ 67,975 ಅಭ್ಯರ್ಥಿಗಳು ಹಾಜರಾಗಿದ್ದು, ಈ ಪೈಕಿ 6,748 ಮಂದಿ ತೇರ್ಗಡೆಯಾಗಿದ್ದಾರೆ ಎಂದು ವಿವರಿಸಿದರು.
ಇನ್ನು ಸೈನ್ಸ್ ವಿಭಾಗದಲ್ಲಿ ತೇರ್ಗಡೆಯಾದವರ ಪ್ರಮಾಣ ಶೇ.65.27 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ಶೇ.76.2 ರಷ್ಟು ಹಾಗೂ ಆರ್ಟ್ಸ್ ವಿಭಾಗದಲ್ಲಿ 41.27ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿದ್ದು, ಕೊಡಗು ಜಿಲ್ಲೆಗೆ 2ನೇ ಸ್ಥಾನ ಲಭ್ಯವಾಗಿದ್ದು, ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಹಾಗೂ ಚಿಕ್ಕಮಗಳೂರು ಜಿಲ್ಲೆ ನಂತರದ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಇನ್ನು ಐದು ಅನುದಾನಿತ ಪದವಿ ಪೂರ್ವ ಕಾಲೇಜು ಸೇರಿದಂತೆ ಒಟ್ಟು 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇನ್ನು ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಶೇ.0.13ರಷ್ಟು ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದರು. ಇನ್ನು ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಸಿದ್ದತೆ ನಡೆಸಿದ್ದು, ಜುಲೈ ಕೊನೆ ವಾರದಲ್ಲಿ ದಿನಾಂಕ ಪ್ರಕಟವಾಗಲಿದೆ.
ಪಿಯು ಬೋರ್ಡ್ ನಿಂದ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಫಲಿತಾಂಶ ಘೋಷಿಸಲು ನಿರ್ಧರಿಸಲಾಗಿತ್ತು. ಆದರೆ, ಅದಕ್ಕೂ ಮೊದಲೇ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಿದೆ. www.karresults.nic.in ನಲ್ಲಿ ವೆಬ್ ಸೈಟ್ ನಲ್ಲಿ ಫಲಿತಾಂಶ ದೊರೆತಿದೆ.