Recent Posts

Sunday, January 19, 2025
ಸುದ್ದಿ

ಅಡಿಕೆ, ಕೊಕ್ಕೋ ಬೆಳೆಗಾರರ ಜೊತೆಗಾರ ; ಸ್ವದೇಶಿ ಚಿಂತನೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಸಂಸ್ಥೆಯ ತೇಜೋವಧೆಗೆ ವ್ಯವಸ್ಥಿತ ಸಂಚು ಹೂಡಿದ್ದಾರೆಯೇ..!? – ದಾಳಿ ನಡೆದಿಯೇ..? ಇಲ್ಲಿದೆ Exclusive ಸ್ಟೋರಿಯ ಅಸಲಿ ಸ್ಟೋರಿ – ಕಹಳೆ ನ್ಯೂಸ್

ಪುತ್ತೂರು : ಇಂದು ೪೭ರ ಹರೆಯದ ಜಟ್ಟಿಗ ಜವಣ. ೧೯೭೩ ಜುಲೈ ೧೧ರಂದು ಬೆಳೆಗಾರರು ಬೆಳೆಗಾರರಿಗಾಗಿಯೇ ಹುಟ್ಟುಹಾಕಿದ ಸಂಸ್ಥೆ ಇದೀಗ ೪೮ರ ಹರೆಯಕ್ಕೆ ಕಾಲಿಟ್ಟಿದೆ.

ನಾಲ್ಕು ದಶಕಗಳ ಹಿಂದಿನ ಮಾತು. ಅಡಿಕೆ ಬೆಳೆ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿತ್ತಷ್ಟೇ. ಮಾರುಕಟ್ಟೆ ಇನ್ನು ಬೆಳೆದಿರಲಿಲ್ಲ. ಕರ್ನಾಟಕ ಹಾಗೂ ಕೇರಳದ ಅಡಿಕೆ, ಕೊಕ್ಕೋ ಬೆಳೆಗಾರರ ಮಾರುಕಟ್ಟೆ ಸಂಕಷ್ಟವನ್ನು ಮನಗಂಡು ಬೆಳೆಗಾರರು ಬೆಳೆಗಾರರಿಗಾಗಿಯೇ ಹುಟ್ಟುಹಾಕಿದ ಸಂಸ್ಥೆ ಕ್ಯಾಂಪ್ಕೋ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರಣಾಸಿ ಸುಬ್ರಾಯ ಭಟ್ ಅವರು ಹುಟ್ಟುಹಾಕಿದ ಸಂಸ್ಥೆಯನ್ನು ಅಷ್ಟೇ ಸಮರ್ಥವಾಗಿ ಅವರ ನಂತರದ ಅಧ್ಯಕ್ಷರು ನಡೆಸಿಕೊಂಡು ಹೋಗಿದ್ದಾರೆ ಎನ್ನುವುದನ್ನು ಸಂಸ್ಥೆಯ ಆರ್ಥಿಕ ವರ್ಷದ ಲೆಕ್ಕಾಚಾರಗಳು ರುಜುವಾತು ಪಡಿಸುತ್ತವೆ. ಕ್ಯಾಂಪ್ಕೋದ ವಾರ್ಷಿಕ ವಹಿವಾಟು ೧೭೪೦೦ ಮಿಲಿಯನ್‌ಗೆ ತಲುಪಿದೆ ಎಂದರೆ ಸಂಸ್ಥೆಯನ್ನು ಮುನ್ನಡೆಸುತ್ತಿರುವವರ ಪರಿಶ್ರಮಕ್ಕೆ ತಲೆದೂಗಲೇಬೇಕು.
೨೦-೨೫ ವರ್ಷಗಳ ಹಿಂದೆ ಕ್ಯಾಂಪ್ಕೋ ಸ್ವಲ್ಪ ಹಿನ್ನಡೆ ಅನುಭವಿಸಿದ್ದು ನಿಜ. ಆದರೆ ಬೆಳೆಗಾರರೇ ಕಟ್ಟಿ ಬೆಳೆಸಿದ ಸಂಸ್ಥೆಯೊಂದು, ಹಿಂದೆ ಬೀಳಲು ಸಾಧ್ಯವೇ. ಸಮರ್ಥ ನಾಯಕತ್ವದಲ್ಲಿ ಮತ್ತೆ ಸಂಸ್ಥೆ ಮುನ್ನಡೆಗೆ ಬಂದಿತು. ವರ್ಷದಿಂದ ವರ್ಷಕ್ಕೆ ವಹಿವಾಟನ್ನು ಹೆಚ್ಚಿಸುತ್ತಾ, ಯಶಸ್ಸಿನ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾಂಪ್ಕೋಗೆ ಮಾತ್ರವಲ್ಲ ರಾಜ್ಯಕ್ಕೆ ಹೆಸರು ತಂದುಕೊಟ್ಟ ಇನ್ನೊಂದು ಮೈಲುಗಲ್ಲು ಎಂದರೆ ಚಾಕಲೇಟ್ ಫ್ಯಾಕ್ಟರಿ. ೧೯೮೬ ಸೆಪ್ಟೆಂಬರ್ ೧ರಂದು ಅಂದಿನ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಂಡಿತು. ಇದರ ಜೊತೆಗೆ ಕಾಳುಮೆಣಸು, ರಬ್ಬರ್ ಸೇರಿದಂತೆ ಇನ್ನಿತರ ಕೃಷ್ಯುತ್ಪನ್ನಗಳನ್ನು ಕೃಷಿಕರಿಂದ ಖರೀದಿಸುತ್ತಿರುವ ಕ್ಯಾಂಪ್ಕೋ, ಕೃಷಿಕರ ಪಾಲಿನ ಆಶಾಕಿರಣ.
ಮಾನ್ಸೂನ್ ಹಾಗೂ ಮಾರುಕಟ್ಟೆ ನಡುವಿನ ಹೊಯ್ದಾಟದಲ್ಲಿ ಕೃಷಿಕರು ಜೀವನ ಸಾಗಿಸುತ್ತಿರುವುದು ಹೊಸ ವಿಷಯವೇನಲ್ಲ. ಪ್ರತಿ ಸಂದರ್ಭವೂ ಕೃಷಿಗೆ ಒಂದಲ್ಲ ಒಂದು ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಬೆನ್ನೆಲುಬಾಗಿ ನಿಂತಿರುವುದು ಕ್ಯಾಂಪ್ಕೋ. ಮಾರುಕಟ್ಟೆ ವಿಚಾರದಲ್ಲಿ ಮಾತ್ರ ಕ್ಯಾಂಪ್ಕೋ ಬೆಳೆಗಾರರ ಜೊತೆ ನಿಂತಿರುವುದಲ್ಲ. ಪ್ರಾಕೃತಿಕ ಅವಘಡಗಳು ಎದುರಾದಾಗಲೂ ಕ್ಯಾಂಪ್ಕೋ ಬೆಳೆಗಾರರ ಜೊತೆಗಿದ್ದುಕೊಂಡೇ, ಸವಾಲುಗಳನ್ನು ಎದುರಿಸಿ ಜಯ ಸಾಧಿಸಿದೆ. ಲಾಕ್‌ಡೌನ್ ಸಂದರ್ಭವೂ ಬೆಳೆಗಾರರ ಜೊತೆಗೆ ನಿಂತ ಸಂಸ್ಥೆಯು ಕೃಷಿಕರೊಂದಿಗಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.
ಕೊರೋನಾ ಮಹಾಮಾರಿ ವ್ಯಾಪಕವಾಗಿ ಪಸರಿಸುತ್ತಿರುವಾಗ ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಹೇರಲಾಯಿತು. ಈ ಸಂದರ್ಭವೂ ಫಸಲನ್ನು ಖರೀದಿಸಲು ಮುಂದಾಗುವ ಮೂಲಕ ಸಂಸ್ಥೆಯು ಕೃಷಿಕರೊಂದಿಗೆ ಇದೆ ಎಂದು ಕೃತಿಯಲ್ಲಿ ತೋರಿಸಿತು.

ಲಾಕ್‌ಡೌನ್ ಸಂದರ್ಭ ಅಡಿಕೆ ಬೆಳೆಗಾರರು ತಮ್ಮ ಫಸಲನ್ನು ಮಾರಲಾಗದೇ ಅತಂತ್ರ ಸ್ಥಿತಿಯಲ್ಲಿದ್ದರು. ಕೃಷಿಕರ ಅಗತ್ಯತೆಯನ್ನು ಮನಗಂಡ ಕ್ಯಾಂಪ್ಕೋ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸರಕಾರದ ಅನುಮತಿ ಪಡೆದು ರಂಗಕ್ಕಿಳಿಯಿತು. ಬೆಳೆಗಾರರ ತತ್ಕಾಲದ ಅವಶ್ಯಕತೆಗಾಗಿ ಏ. ೧೩ರಿಂದ ದಿನವೊಂದಕ್ಕೆ ೩೦ ಸದಸ್ಯರಂತೆ, ಪ್ರತಿ ಸದಸ್ಯರಿಂದ ತಿಂಗಳಿಗೆ ಒಂದು ಕ್ವಿಂಟಾಲ್ ಎಂಬ ಪರಿಮಿತಿ ಹಾಕಿಕೊಂಡು ವಾರದಲ್ಲಿ ಮೂರು ದಿನ ಅಡಿಕೆ ಖರೀದಿಯನ್ನು ಆರಂಭಿಸಿಯೇ ಬಿಟ್ಟಿತು. ಕ್ರಮೇಣ ಬೇಡಿಕೆಯನ್ನು ಹೊಂದಿಕೊಂಡು ಪರಿಮಿತಿಯನ್ನು ಪ್ರತಿ ಸದಸ್ಯರಿಂದ ತಿಂಗಳಿಗೆ ೨ ಕ್ವಿಂಟಾಲ್ ಮತ್ತು ಆ ನಂತರ ೫ ಕ್ವಿಂಟಾಲ್ ಅಡಿಕೆ ಖರೀದಿಸುವಂತೆ ವಿಸ್ತರಿಸಿಕೊಂಡಿತು. ಹಿಂದಿನ ಆರ್ಥಿಕ ವರ್ಷದಲ್ಲಿ ೧೪೩೦.೬೪ ಕೋಟಿ ಮೌಲ್ಯದ ಅಡಿಕೆಯನ್ನು ಸಂಸ್ಥೆಯು ಖರೀದಿಸಿದ್ದು, ೧೫೬೭ ಕೋಟಿ ರೂ. ಮೌಲ್ಯದ ಅಡಿಕೆಯನ್ನು ಮಾರಾಟ ಮಾಡಿದೆ.
ಚಾಕಲೇಟ್ ಫ್ಯಾಕ್ಟರಿ ತನ್ನ ಸುಪರ್ಧಿಯಲ್ಲೇ ಇರುವುದರಿಂದ ಕೊಕ್ಕೋ ಬೀಜಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿದಂತಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ೮೫.೯೩ ಕೋಟಿ ರೂ. ಮೌಲ್ಯದ ಕೊಕ್ಕೋ ಬೀಜಗಳನ್ನು ಖರೀದಿಸಿ, ಚಾಕಲೇಟು ಉತ್ಪಾದನೆಗಾಗಿ ಬಳಸಿಕೊಂಡಿದೆ. ೨೨೯.೨೫ ಕೋಟಿ ರೂ. ಮೌಲ್ಯದ ಚಾಕಲೇಟು ಮತ್ತು ಚಾಕಲೇಟು ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ.
ಸಂಸ್ಥೆಯು ೩೭.೭೮ ಕೋಟಿ ರೂ. ಮೌಲ್ಯದ ಕಾಳುಮೆಣಸನ್ನು ಖರೀದಿ ಮಾಡಿದ್ದು, ೨೮.೦೯ ಕೋಟಿ ರೂ. ಮೌಲ್ಯದ ಕಾಳುಮೆಣಸನ್ನು ಮಾರಾಟ ಮಾಡಿದೆ. ೨೩.೩೭ ಕೋಟಿ ರೂ. ಮೌಲ್ಯದ ರಬ್ಬರ್ ಖರೀದಿ ಮಾಡಲಾಗಿದ್ದು, ೨೨ ಕೋಟಿ ರೂ. ಮೌಲ್ಯದ ರಬ್ಬರ್ ಮಾರಾಟವಾಗಿದೆ. ಸಂಸ್ಥೆಯು ೨.೮೨ ಕೋಟಿ ರೂ. ಮೌಲ್ಯದ ಕ್ಯಾಂಪ್ಕೊ ಬ್ರ್ಯಾಂಡ್ ಮೈಲುತುತ್ತನ್ನು ತನ್ನ ಸದಸ್ಯ ಬೆಳೆಗಾರರಿಗೆ ಮಾರಾಟ ಮಾಡಿದೆ ಎನ್ನುವುದು ಉಲ್ಲೇಖನೀಯ.

ಬೆಳೆಗಾರರ ಜೊತೆಗಾರ:

ಕ್ಯಾಂಪ್ಕೋದ ಯಶಸ್ಸಿನ ಹಿಂದೆ ವ್ಯವಹಾರಿಕ ದೃಷ್ಟಿಕೋನವಷ್ಟೇ ಇಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದು ತುಂಬಾ ಅವಶ್ಯಕ. ಇದು ಸದಸ್ಯ ಬೆಳೆಗಾರರ ಜೊತೆಗಾರನಾಗಿಯೂ, ಕಷ್ಟದಲ್ಲಿ ಸಹವರ್ತಿಯಾಗಿಯೂ ನಿಂತಿದೆ. ಸಾಮಾಜಿಕ ಕಳಕಳಿಯ ಭಾಗವಾಗಿ ೧೪ ಸದಸ್ಯ ಬೆಳೆಗಾರರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ, ೨ ಸದಸ್ಯರಿಗೆ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗಾಗಿ ಮತ್ತು ೧೬ ಸದಸ್ಯ ಬೆಳೆಗಾರರಿಗೆ ಡಯಾಲಿಸಿಸ್ ಚಿಕಿತ್ಸೆಗಾಗಿ ಆರ್ಥಿಕ ಸಹಾಯವನ್ನು ಒದಗಿಸಿದೆ.

ಸಂಸ್ಥೆಯ ಸದಸ್ಯ ಬೆಳೆಗಾರರು ಅಥವಾ ಅವರ ಮನೆಯವರು ಅಥವಾ ಸದಸ್ಯ ಬೆಳೆಗಾರರ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೃಷಿ ಕೆಲಸದ ಸಂದರ್ಭ ಅಪಘಾತ ಮರಣ ಹೊಂದಿದ್ದಲ್ಲಿ ಅವರ ಮನೆಯವರಿಗೆ ೫೦ ಸಾವಿರ ರೂ.ನ ಆರ್ಥಿಕ ನೆರವು ನೀಡುವ ನೂತನ ಯೋಜನೆಯನ್ನು ಆರಂಭಿಸಿದೆ. ಈಗಾಗಲೇ ಒಬ್ಬ ಸದಸ್ಯ ಹಾಗೂ ಇಬ್ಬರು ಕಾರ್ಮಿಕರ ಮನೆಯವರಿಗೆ ಈ ಯೋಜನೆಯನ್ವಯ ನೆರವನ್ನು ಒದಗಿಸಲಾಗಿದೆ.
ಬೆಳೆಗಾರರ ಉತ್ಪನ್ನಗಳನ್ನು ರೋಗಗಳಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಐಎಸ್‌ಐ ಗುಣಮಟ್ಟದ ೧೭೧.೩೮ ಮೆಟ್ರಿನ್ ಟನ್ ಕ್ಯಾಂಪ್ಕೋ ಬ್ರ್ಯಾಂಡ್ ಮೈಲುತುತ್ತನ್ನು ಸಂಸ್ಥೆಯ ವಿವಿಧ ಶಾಖೆಗಳ ಮೂಲಕ ಸದಸ್ಯರಿಗೆ ಸ್ಪರ್ಧಾತ್ಮಕ ದರದಲ್ಲಿ ವಿತರಿಸಲಾಗಿದೆ.

ಮನೆ ಭೇಟಿ:
ಸಹಕಾರ ಸಪ್ತಾಹ ಕ್ಯಾಂಪ್ಕೋದಲ್ಲಿ ವಿಭಿನ್ನವಾಗಿ ಆಚರಿಸಲ್ಪಡುತ್ತದೆ. ಸಹಕಾರ ಸಪ್ತಾಹದ ಸಂದರ್ಭದಲ್ಲಿ ಸದಸ್ಯ ಬೆಳೆಗಾರರ ಮನೆಗಳಿಗೆ ಸಂಸ್ಥೆಯ ಆಡಳಿತ ವರ್ಗದವರು, ಸಿಬ್ಬಂದಿಗಳು ಭೇಟಿ ನೀಡುವ ಪರಿಪಾಠವನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಮನೆಯವರೊಂದಿಗೆ ಸಂವಾದವನ್ನು ನಡೆಸಲಾಗುತ್ತದೆ.

ಯಂತ್ರ ಆವಿಷ್ಕಾರಕ್ಕೆ ಪ್ರೋತ್ಸಾಹ :

ಕೃಷಿಗೆ ತಂತ್ರಜ್ಞಾನ ಜೊತೆಗಾರನಾಗಬೇಕಾದ ಅವಶ್ಯಕತೆ ಇಂದು ನಮ್ಮ ಮುಂದಿದೆ. ಈ ದಿಶೆಯಲ್ಲಿ ಕ್ಯಾಂಪ್ಕೋ ಈಗಾಗಲೇ ಕಾರ್ಯತತ್ಪರವಾಗಿದ್ದು, ಅಡಿಕೆ ಸುಲಿಯುವ ಯಂತ್ರದಲ್ಲಿ ಆವಿಷ್ಕಾರಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಸ್ಪರ್ಧೆಯೊಂದನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ವಿಜೇತ ೩ ಯಂತ್ರಗಳ ತಯಾರಕರಿಗೆ ೨೦೨೦ರ ಫೆಬ್ರವರಿ ೮ರಂದು ಪೆರ್ಲದ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ಕೃಷಿಮೇಳದಲ್ಲಿ ಒಟ್ಟು ೧.೬ ಲಕ್ಷ ರೂ. ಮೊತ್ತದ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಗಿದೆ.

ಚಾಕಲೇಟ್‌ಗೆ ಕ್ಯಾಂಪ್ಕೋ ಬ್ರಾಂಡ್ :

೧೫೯೬೨ ಮೆಟ್ರಿನ್ ಟನ್ ತನ್ನ ಚಾಕಲೇಟ್ ಉತ್ಪಾದನೆಯಲ್ಲಿ ೧೧೬೫೯ ಮೆಟ್ರಿಕ್ ಟನ್ ಚಾಕಲೇಟುಗಳು ಕ್ಯಾಂಪ್ಕೋ ಬ್ರ್ಯಾಂಡ್‌ನಲ್ಲಿ ಹೊರಬಂದಿವೆ ಎನ್ನುವುದು ಹೆಮ್ಮೆ ಪಡುವ ವಿಷಯ. ಅಂದರೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ ಎನ್ನುವುದಕ್ಕೆ ಬಲ ಬಂದಂತಾಗಿದೆ. ೨೨.೮೧ ಕೋಟಿ ರೂ. ಮೌಲ್ಯದ ೧೫೦೭ ಮೆಟ್ರಿಕ್ ಟನ್ ಚಾಕೊಲೇಟ್ ಉತ್ಪನ್ನಗಳ ರಫ್ತು ಸೇರಿದಂತೆ ೨೨೪ ಕೋಟಿ ರೂ. ಮೌಲ್ಯದ ಚಾಕಲೇಟು ಮಾರಾಟವನ್ನು ಮಾಡಲಾಗಿದೆ. ಹೊಸ ಯಂತ್ರದ ಸಹಾಯದಿಂದ ೮೦೦ ಮೆಟ್ರಿಕ್ ಟನ್‌ನಷ್ಟು ಹೆಚ್ಚುವರಿ ಚೊಕೊಚಿಪ್ಸ್ ಉತ್ಪಾದಿಸಿದ್ದು, ಒಟ್ಟು ಉತ್ಪಾದನೆಯ ಪ್ರಮಾಣ ೧೮೯೨ ಮೆಟ್ರಿಕ್ ಟನ್.

ಇ.ಡಿ. ದಾಳಿ ನಡೆದಿಲ್ಲ : 

ಥೈಲ್ಯಾಂಡ್ – ಇಂಡಿಯಾ ವ್ಯವಹಾರ ಒಪ್ಪಂದದ ಆಧಾರದಲ್ಲಿ ಆಮದು ಮಾಡಿಕೊಳ್ಳುವ ಉತ್ಪನ್ನಕ್ಕೆ ಸುಂಕ ಉಚಿತ ಎಂದೇ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋಗೆ ಅಗತ್ಯವಿರುವ ೧೩೦೦ ಟನ್ ಕೊಕ್ಕೋ ಬೀನ್ಸ್ ಅನ್ನು ಥೈಲ್ಯಾಂಡ್‌ನಿಂದ ಏಜೆಂಟ್ ಮೂಲಕ ಆಮದು ಮಾಡಿಕೊಳ್ಳಲಾಯಿತು. ಏಜೆಂಟ್ ಜತೆಗಿನ ಒಪ್ಪಂದ ಪ್ರಕಾರ ಕೊಕ್ಕೋ ಬೀನ್ಸ್ ಅನ್ನು ಸಂಸ್ಥೆಗೆ ತಂದು ಮುಟ್ಟಿಸುವಲ್ಲಿವರೆಗೆ ಆತನದ್ದೇ ಜವಾಬ್ದಾರಿ. ಅಂದರೆ ತೆರಿಗೆ ರೂಪದ ಪಾವತಿಯನ್ನು ಆತನೇ ಪಾವತಿ ಮಾಡಬೇಕಿತ್ತು. ಆದರೆ ಆತ ಪಾವತಿ ಮಾಡಿರಲಿಲ್ಲ. ಆದ್ದರಿಂದ ಡಿಆರ್ ಐ (ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್) ಅವರು ಪರಿಶೀಲನೆಗೆ ಬರುವಾಗ ಸುಂಕ ಕಟ್ಟದೇ ಇರುವುದು ಬೆಳಕಿಗೆ ಬಂದಿದ್ದು, ಆ ಮೊತ್ತವನ್ನು ಕ್ಯಾಂಪ್ಕೋ ಭರಿಸಿದೆ. ಅಲ್ಲದೇ ಕ್ಯಾಂಪ್ಕೋ ಆಮದು ಮಾಡಿಕೊಂಡ ಕೊಕ್ಕೋ ಬೀನ್ಸ್‌ಗೆ ಥೈಲ್ಯಾಂಡ್ ಪ್ರಮಾಣ ಪತ್ರವನ್ನೂ ನೀಡಿತ್ತು. ಅಡಿಕೆ, ಕೊಕ್ಕೋ ಖರೀದಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕ್ಯಾಂಪ್ಕೋ ವ್ಯತ್ಯಾಸವಾದ ಮೊತ್ತವನ್ನು ಪಾವತಿಸಿದೆ. ಇದರ ಜೊತೆಗೆ ಏಜೆಂಟ್ ವಿರುದ್ಧ ಸೆಟ್ಲ್‌ಮೆಂಟ್ ಕಮೀಷನ್‌ಗೆ ಅಪೀಲ್ ಮಾಡಲಾಗಿದೆ. ಇದರ ಬಗ್ಗೆ ಹೋರಾಟ ನಡೆಸಲು ಕ್ಯಾಂಪ್ಕೋಗೆ ಎಲ್ಲಾ ಅಧಿಕಾರ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕ್ಯಾಂಪ್ಕೋದ ಮೇಲೆ ಇಡಿ ದಾಳಿ ನಡೆದಿಲ್ಲ ಎನ್ನಲಾಗಿದೆ.

ಕ್ಯಾಂಪ್ಕೋ ಸಂಸ್ಥೆ ಮೇಲೆ ಇಡಿ ದಾಳಿ ನಡೆದಿದ್ದು, ಸಂಸ್ಥೆ ದಂಡ ಪಾವತಿ ಮಾಡಿದೆ ಎಂಬೆಲ್ಲಾ ರೀತಿಯಲ್ಲಿ ಅಂತರ್ಜಾಲ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಇದು ಸಂಸ್ಥೆಯ ಹೆಸರನ್ನು ಕೆಡಿಸುವ ಸಂಚಿನ ಒಂದು ಭಾಗವಷ್ಟೇ. ಕ್ಯಾಂಪ್ಕೋ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಪಾರದರ್ಶಕವಾಗಿ ನಡೆಸುತ್ತಿದ್ದು, ಯಾವುದೇ ರೀತಿಯಲ್ಲಿ ಲೋಪ ಎಸಗಿಲ್ಲ. ಡಿಆರ್‌ಐ ಪರಿಶೀಲನೆ ಸಂದರ್ಭ ಡ್ಯೂಟಿ ಏವಿಯೇಷನ್ (ಕಟ್ಟಿದ ಸುಂಕದಲ್ಲಾದ ವ್ಯತ್ಯಾಸ) ಅನ್ನು ಗಮನಕ್ಕೆ ತಂದಿದ್ದು, ಇದನ್ನು ಪಾವತಿಸಲಾಗಿದೆ ಎಂದು ಹೇಳಲಾಗಿದೆ.