ಬೆಳ್ತಂಗಡಿಯ ಅಕ್ರಮ ಇಸ್ಟೀಟ್ ಅಡ್ಡೆಯಲ್ಲಿ ಪೊಲೀಸರಂತೆ ನಟಿಸಿ 10 ಲಕ್ಷ ನಗದು ದರೋಡೆಗೈದ ಮುಸ್ತಾಪ ಸಹಿತ ಮೂವರು ಆರೋಪಿಗಳು ಪೊಲೀಸರಿಗೆ ಶರಣು – ಕಹಳೆ ನ್ಯೂಸ್
ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಮೇ 29ರಂದು ಅಕ್ರಮವಾಗಿ ಇಸ್ಪೀಟ್ ಆಟವಾಡಿ ಪೊಲೀಸರಂತೆ ನಟಿಸಿ ಆಟದಲ್ಲಿ ನಿರತರಾಗಿದ್ದ ಚಿಕ್ಕಮಗಳೂರು ಮಳಲೂರು ನಿವಾಸಿ ಹೊಯ್ಸಳ ಜೆ.ಪಿ ಎಂಬವರ ರೂ. 10 ಲಕ್ಷ ನಗದು ಇದ್ದ ಬ್ಯಾಗನ್ನು ದರೋಡೆಗೈದ ಮೂವರು ಆರೋಪಿಗಳು ಬೆಳ್ತಂಗಡಿ ಪೊಲೀಸರಿಗೆ ಶರಣಾಗಿದ್ದಾರೆ.
ಗುರುವಾಯನಕೆರೆ ದಾವೂದ್ ಎಂಬಾತನ ತಂಡದ ಮುಸ್ತಾಪ, ಇಮ್ತಿಯಾಜ್ ಹಾಗೂ ಚೇರಿಮೋನು ಶರಣಾದ ಆರೋಪಿಗಳಾಗಿದ್ದು, ತನಿಖೆ ನಡೆಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಆರೋಪಿಗಳಿಂದ ರೂ. 7 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮೂರು ಮಂದಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಲಾಯಿಲ ಗ್ರಾಮದ ಪಡ್ಲಾಡಿ ಬಳಿ ಗುರುವಾಯನಕೆರೆಯ ದಾವುದ್ ತಂಡದವರು ಇಸ್ಪೀಟ್ ಅಡ್ಡೆ ನಡೆಸಿದ್ದು, ಅಲ್ಲಿಗೆ ಹೊಯ್ಸಳ ಜೆ.ಪಿ ಎಂಬವರು ಆಟವಾಡಲು ಬಂದಿದ್ದರು. ಇಸ್ಪೀಟ್ ಕ್ಲಬ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ಪೊಲೀಸರು ರಾತ್ರಿ ದಾಳಿ ನಡೆಸುತ್ತಿದ್ದಂತೆಯೇ ಇದನ್ನರಿತ ದಾವುದ್ ತಂಡದವರು ಹೊಯ್ಸಳರ ರೂ.10 ಲಕ್ಷ ಇದ್ದ ನಗದನ್ನು ಕಸಿದು ಕತ್ತಲಲ್ಲಿ ಪರಾರಿಯಾಗಿದ್ದರು. ಬೆಳ್ತಂಗಡಿ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಸಂದೇಶ್ ಪ್ರಕರಣದ ತನಿಖೆ ನಡೆಸಿದ್ದರು. ಇದೀಗ ದಾವೂದ್ ನ ಬಂಧನವಾಗಬೇಕಾಗಿದ್ದು ಇದಕ್ಕಾಗಿ ಪೋಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.