ಬೆಂಗಳೂರು: ದೇಶದ ಮೊದಲ ರೇಷ್ಮೆ ಬ್ಯಾಂಕ್ ರಾಜ್ಯದಲ್ಲಿ ಶೀಘ್ರ ಅಸ್ತಿತ್ವಕ್ಕೆ ಬರಲಿದೆ.ನೂಲು ಮಾರಾಟ ಮತ್ತು ಖರೀದಿಗೆ ಅನುಕೂಲವಾಗಲು ರೇಷ್ಮೆ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕೆ ಆರಂಭಿಕವಾಗಿ ಕೇಂದ್ರದಿಂದ ಐದು ಕೋಟಿ ರೂಪಾಯಿ ನೀಡಲಾಗುವುದು ಎಂದು ಜವಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಪ್ರಕಟಿಸಿದರು.
ನಗರದ ಅಶೋಕ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರದರ್ಶನ ಮೇಳ “ಟೆಕ್ಸ್‌ಟೈಲ್ ಇನ್ ಕರ್ನಾಟಕ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಷ್ಟೇ ಅಲ್ಲ, ಇದೇ ಮಾದರಿಯಲ್ಲಿ ರೇಷ್ಮೆ ಕೋಶ ಸ್ಥಾಪನೆಗೆ ಯಾರಾದರೂ ಮುಂದೆ ಬಂದರೆ, ಅದಕ್ಕೂ ತಲಾ ಐದು ಕೋಟಿ ರೂ. ಅನುದಾನ ನೀಡಲಾಗುವುದು. ಈ ವಿನೂತನ ಬ್ಯಾಂಕಿನಿಂದ ನೇರವಾಗಿ ರೀಲರ್‌ಗಳು, ನೇಕಾರರು ಮತ್ತು ಪರೋಕ್ಷವಾಗಿ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಬೆಳೆಗಾರರಿಂದ ಗೂಡು ಖರೀದಿಸುವ ರೀಲರ್‌ಗಳು, ಅದರಿಂದ ನೂಲು ತೆಗೆಯುತ್ತಾರೆ. ಕೆಲವು ಸಲ ನೂಲು ಖರೀದಿಗೆ ನೇಕಾರರು ಮುಂದೆ ಬರುವುದಿಲ್ಲ. ಇದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದು ಪರೋಕ್ಷವಾಗಿ ರೈತರ ಮೇಲೂ ಪರಿಣಾಮ ಬೀರುತ್ತಿದೆ. ಈಗ ರೇಷ್ಮೆ ಕೋಶದಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೆ, ರೀಲರ್‌ಗಳು ರೇಷ್ಮೆ ನೂಲುಗಳನ್ನು ಈ ಬ್ಯಾಂಕಿನಲ್ಲಿ ಇಟ್ಟು, ಮುಂಗಡ ಹಣ ಪಡೆಯಬಹುದು. ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ರೀಲರ್‌ಗಳಿದ್ದು, ಎರಡು ಲಕ್ಷಕ್ಕೂ ಹೆಚ್ಚು ರೇಷ್ಮೆ ಉತ್ಪಾದಕರಿದ್ದಾರೆ.
ಇದಲ್ಲದೆ, ನಗರದಲ್ಲಿ ನೂರು ಕೋಟಿ ರೂ.ಗಳಲ್ಲಿ ಜವಳಿ ಪಾರ್ಕ್ ನಿರ್ಮಿಸಲೂ ಕೇಂದ್ರ ಸಿದ್ಧ ಎಂದೂ ಸ್ಮೃತಿ ಇರಾನಿ ತಿಳಿಸಿದರು.
ರಾಜ್ಯ ಸರ್ಕಾರ ಭೂಮಿ ನೀಡುವುದಾದರೆ ಹಾಗೂ ಹೂಡಿಕೆದಾರರು ಮುಂದೆಬಂದರೆ, ಯೋಜನೆಗೆ ಸಂಬಂಧಿಸಿದಂತೆ ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ರಚಿಸಿ, ಜವಳಿ ಪಾರ್ಕ್ ಸ್ಥಾಪನೆಗಾಗಿ ಕೇಂದ್ರವು ಶೇ. 40ರಷ್ಟು ಸಬ್ಸಿಡಿ ರೂಪದಲ್ಲಿ ಅನುದಾನ ನೀಡಲಿದೆ ಎಂದು ಹೇಳಿದರು.
ರೇಷ್ಮೆ ಆಮದು ಸುಂಕವನ್ನು ಕಳೆದ ಬಜೆಟ್‌ನಲ್ಲಿ ಶೇ. 10ರಿಂದ 20ರಷ್ಟು ಹೆಚ್ಚಿಸಲಾಗಿದೆ ಎಂದ ಅವರು, ಇದೇ ವೇಳೆ ಕೈಮಗ್ಗ ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಅಧ್ಯಯನಕ್ಕೆ ಚಾಲನೆ ನೀಡಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮಾತನಾಡಿ, ಪ್ರತಿ ಕೆಜಿ ಕಕೂನ್‌ಗೆ 150 ರೂ. ಪೋತ್ಸಾಹ ಮತ್ತು ಸಿಡಿಪಿ ಕಾರ್ಯಕ್ರಮ ಪುನರಾರಂಭಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಕೆಗೆ ಪ್ರಯತ್ನಿಸಲಾಗುವುದು ಎಂದರು.
ಇದೇ ವೇಳೆ ವಿದ್ಯುತ್‌ಮಗ್ಗ ನೇಕಾರರಿಗಾಗಿ ಐ ಪವರ್-ಟೆಕ್ಸ್ ಆನ್‌ಲೈನ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲಾಯಿತು. ಕೇಂದ್ರ ಸಾಂಖೀÂಕ ಮತ್ತು ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಪಿ.ಸಿ. ಮೋಹನ್ ಮಾತನಾಡಿದರು. ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ ಉಪಸ್ಥಿತರಿದ್ದರು.
‘ಕೋಲಾಲ್ ಗೋಲ್ಡ್’ಗೆ ಪರ್ಯಾಯವಾಗಿ ಕೇಂದ್ರೀಯ ರೇಷ್ಮೆ ಮಂಡಳಿಯು ಬೈವೋಲ್ಟಿನ್ ಡಬಲ… ಹೈಬ್ರಿಡ್ ಮಾದರಿಯ ಹೊಸ ತಳಿ ರ್ಜಿ*ಜಿ11 ಹೊರತಂದಿದೆ.
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಈ ಹೊಸ ತಳಿಯನ್ನು ಬಿಡಗಡೆಗೊಳಿಸಿದರು.
ಈ ಹೊಸ ತಳಿಯು ಹೆಚ್ಚು ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಕೋಲಾರ್ ಗೋಲ್ಡ್‌ಗೆ ರೇಟಿಂಗ್ ಇಲ್ಲ. ಆದರೆ, ಈ ಹೈಬ್ರಿಡ್ ತಳಿಗೆ ರೇಟಿಂಗ್ ಇದೆ. ಅಷ್ಟೇ ಅಲ್ಲ ಎಕರೆಗೆ 140 ರಿಂದ 150 ಕೆಜಿ ಇಳುವರಿ ಬರಲಿದ್ದು, 10ರಿಂದ 15 ಸಾವಿರ ರೂ. ಹೆಚ್ಚು ಆದಾಯ ಹೆಚ್ಚು ಬರಲಿದೆ ಎಂದು ಮಂಡಳಿ ನಿರ್ದೇಶಕ ಡಾ.ಶಿವಪ್ರಸಾದ್ ತಿಳಿಸಿದರು.