ರಾಜ್ಯದಲ್ಲಿ ಇಂದು 3,649 ಮಂದಿಗೆ ಕೊರೊನಾ ಪಾಸಿಟಿವ್ ; ಕೊರೊನಾ ಸೋಂಕಿನಿಂದ ಇಂದು 61 ಜನ ಸಾವು – ಕಹಳೆ ನ್ಯೂಸ್
ಬೆಂಗಳೂರು : ಒಂದೆಡೆ ನಾಳೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆಯಾಗುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಇಂದು ಕೊರೊನಾ ಅರ್ಭಟ ಮುಂದುವರೆದಿದ್ದು, ಹೊಸದಾಗಿ 3,649 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 71,069ಕ್ಕೇರಿಕೆಯಾಗಿದೆ.ಒಂದೇ ದಿನ 61 ಮಂದಿ ಕೊರೊನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,464ಕ್ಕೆ ಏರಿಕೆಯಾಗಿದೆ. ಎಂದಿನಂತೆ ರಾಜಧಾನಿ ಬೆಂಗಳೂರು ಹೊಸ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.
1,714 ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿಪತ್ತೆಯಾಗಿವೆ. ಒಂದೇ ದಿನ 1664 ಜನ ಗುಣಮುಖರಾಗಿರುವುದು ರಾಜ್ಯದ ಜನತೆಗೆ ಸ್ವಲ್ಪ ಸಮಾಧಾನ ತರಿಸಿದೆ. ಕೊರೊನಾ ಸೋಂಕಿನಿಂದ ಇಂದು 61 ಜನರ ಸಾವನ್ನಪ್ಪಿದ್ದಾರೆ.
ಅದರಲ್ಲೂ ಬೆಂಗಳೂರಿನಲ್ಲಿ ಇಂದು ಕೊರೊನಾಗೆ 22ಸೋಂಕಿತರು ಬಲಿಯಾಗಿದ್ದಾರೆ. ಇದೀಗ, ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1,464 ಜನರ ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆ 720 ತಲುಪಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 1,664 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 25,459 ಕ್ಕೆ ಏರಿಕೆಯಾಗಿದೆ.ಇಂದು ಒಂದೇ ದಿನದಲ್ಲಿ 43,904 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈವರೆಗೂ 10,64,734 ಪರೀಕ್ಷೆ ನಡೆಸಲಾಗಿದೆ.
ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಇದುವರೆಗೂ 71,069 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 25,459 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಾವಿನ ಸರಣಿ ಸ್ವಲ್ಪ ಇಳಿಮುಖವಾಗಿದೆ.
ಇನ್ನು, ಬಳ್ಳಾರಿಯಲ್ಲಿ 193, ದಕ್ಷಿಣ ಕನ್ನಡದಲ್ಲಿ 149 ಪ್ರಕರಣಗಳು ಕಂಡುಬಂದಿದ್ದರೆ, ಮೈಸೂರಿನಲ್ಲಿ 135, ಯಾದಗಿರಿ 117, ಉತ್ತರ ಕನ್ನಡ 109, ಹಾಸನ 107, ಕೋಲಾರದಲ್ಲಿ 103 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.
ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ ಮಂಗಳವಾರ ಕೊರೊನಾ ಕೇಸ್‌ಗಳು ವರದಿಯಾಗಿವೆ. ಸೋಮವಾರವೂ ಸಹ ರಾಜ್ಯದಲ್ಲಿ 3648 ಪ್ರಕರಣಗಳು ಕಂಡುಬಂದಿತ್ತು.
ಕೊರೊನಾ ಸೋಂಕಿತರ ಏರಿಕೆಯ ನಡುವೆಯೂ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಬುಧವಾರದಿಂದ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಲಾಕ್‌ಡೌನ್ ವಿಧಿಸಬೇಡಿ, ಲಾಕ್‌ಡೌನ್ ಹೊರತಾದ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ರಾತ್ರಿಗೆ ಲಾಕ್‌ಡೌನ್ ಅಂತ್ಯಗೊಳ್ಳಲಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ ಕಳೆದ ವಾರ ಮಂಗಳವಾರ ರಾತ್ರಿಯಿಂದ 1 ವಾರಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿತ್ತು.
ಈ ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರಿನ ಕೊರೋನಾ ಕೇಸ್ಗಳ ಸಂಖ್ಯೆ ಕೊಂಚ ನಿಯಂತ್ರಣಕ್ಕೆ ಬಂದಿದೆ. ದಿನಕ್ಕೆ 2 ಸಾವಿರ ಗಡಿ ದಾಟಿದ್ದ ಬೆಂಗಳೂರಿನ ಸೋಂಕಿತರ ಪ್ರಮಾಣ ಕೊಂಚ ಇಳಿಮುಖವಾಗುತ್ತಿದೆ.