ನವದೆಹಲಿ:ದೇಶಾದ್ಯಂತ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಯಾತ್ರಾರ್ಥಿಗಳ ಪವಿತ್ರ ವಾರ್ಷಿಕ ಅಮರನಾಥ್ ಯಾತ್ರೆಯನ್ನು ಈ ವರ್ಷ ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಳೆದ ವರ್ಷವೂ ಕೂಡಾ ಅಮರನಾಥ್ ಯಾತ್ರೆ ದಿಢೀರನೆ ರದ್ದುಗೊಂಡಿತ್ತು. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಘೋಷಿಸಿದ್ದ ಎರಡು ಮಹತ್ವದ ನಿರ್ಧಾರ. ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಮತ್ತು ಎರಡು ಕೇಂದ್ರಾಡಳಿತ ಪ್ರದೇಶದ ಘೋಷಣೆ.
ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮರನಾಥ್ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳನ್ನು ಮಾರ್ಗ ಮಧ್ಯದಲ್ಲಿಯೇ ಜಮ್ಮು-ಕಾಶ್ಮೀರದಿಂದ ವಾಪಸ್ ಕಳುಹಿಸಲಾಗಿತ್ತು.
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿರುವ ಅಮರನಾಥ್ ದೇಗುಲದ ಗುಹೆಯಲ್ಲಿ ಹಿಮ ಹೆಪ್ಪುಗಟ್ಟಿ ಶಿವನ ಲಿಂಗರೂಪ ತಾಳಲಿದ್ದು, ಇದನ್ನು ನೋಡಲು ದೇಶ, ವಿದೇಶಗಳ ಲಕ್ಷಾಂತರ ಭಕ್ತರು ಅಮರನಾಥ್ ಯಾತ್ರೆ ಕೈಗೊಳ್ಳುತ್ತಿದ್ದರು. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಕೂಡಾ ಬಿಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುತ್ತಿತ್ತು.
ಕೋವಿಡ್ 19 ವೈರಸ್ ನಿಂದಾಗಿ ಆಡಳಿತ ಮಂಡಳಿ ಭಾರವಾದ ಹೃದಯದಿಂದ ಈ ವರ್ಷ ಅಮರನಾಥಜೀ ಯಾತ್ರೆಯನ್ನು ರದ್ದುಗೊಳಿಸಿದ್ದೇವೆ ಎಂಬುದಾಗಿ ಘೋಷಿಸುತ್ತಿದ್ದೇವೆ ಎಂದು ಅಮರನಾಥ್ ದೇವಾಲಯ ಮಂಡಳಿ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಭಕ್ತರು ಅಮರನಾಥಜೀಗೆ ಸಲ್ಲಿಸುವ ಪೂಜೆಯನ್ನು ನೇರಪ್ರಸಾರದಲ್ಲಿ ಭಕ್ತರು ಕಣ್ತುಂಬಿಕೊಳ್ಳುವ ಮೂಲಕ ಗೌರವ ಸಲ್ಲಿಸಬಹುದಾಗಿದೆ ಎಂದು ಆಡಳಿತ ಮಂಡಳಿ ವಿವರಿಸಿದೆ.