ದೇವರ ದರ್ಶನಕ್ಕಷ್ಟೇ ಅವಕಾಶ, ದೇಗುಲದಲ್ಲಿ ಸೇವೆ ಇರಲ್ಲ, ಸಾರ್ವಜನಿಕವಾಗಿ ನಾಗರಪಂಚಮಿ ಆಚರಣೆ ನಿಷಿದ್ಧ!-ಕಹಳೆ ನ್ಯೂಸ್
ಸುಬ್ರಹ್ಮಣ್ಯ: ಕರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಎಲ್ಲ ದೇವಸ್ಥಾನಗಳಲ್ಲಿ ಯಾವುದೇ ಸೇವೆಗಳು ಆರಂಭಗೊಳ್ಳುವುದಿಲ್ಲ. ದೇವರ ದರ್ಶನ ಮಾಡಲಷ್ಟೇ ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ಹಿಂದು ಧರ್ಮಾದಾಯ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಕ್ಕೆ ಕ್ಷೇತ್ರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇವಸ್ಥಾನದಲ್ಲಿ ಸೇವೆ ಪುನರಾರಂಭದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕವಾಗಿ ನಾಗರಪಂಚಮಿ ಆಚರಿಸಲು ಅವಕಾಶವಿಲ್ಲ. ಆರೋಗ್ಯ ಇಲಾಖೆಯ ಸಲಹೆ ಮೇರೆಗೆ ಕೇವಲ ಅರ್ಚಕರಿಗೆ ಮಾತ್ರ ದೇವಳ ಮತ್ತು ನಾಗಬನಗಳಲ್ಲಿ ತನು ಎರೆಯುವುದು
ಸೇರಿದಂತೆ ವಿವಿಧ ವೈದಿಕ ವಿಧಿವಿಧಾನ ನೆರವೇರಿಸಲು ಅವಕಾಶವಿದೆ. ಅವರವರ ಮನೆಯ ನಾಗನ ಕಟ್ಟೆಗಳಲ್ಲಿ ಮನೆಯವರು ಮಾತ್ರ ನಾಗರಪಂಚಮಿ ಆಚರಿಸಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಸರಳ ಸಾಮೂಹಿಕ ವಿವಾಹ ನಡೆಸಲು ಚಿಂತನೆ ನಡೆಸಲಾಗುವುದು. ರಾಜ್ಯ ಧಾರ್ಮಿಕ ಪರಿಷತ್ನಿಂದ ನೌಕರರಿಗೆ 6ನೇ ಆಯೋಗದ ವೇತನ ನೀಡಲು ಅಧಿಕೃತ ಆದೇಶ ನೀಡಿದ್ದು, ಶ್ರೀಘ್ರವೇ ಜಾರಿಗೊಳ್ಳಲಿದೆ. ಕುಕ್ಕೆ ದೇವಳದಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ 120 ಮಂದಿಯನ್ನು ಕಾಯಂ ಮಾಡುವ ಕಡತ ಪರಿಶೀಲನೆ ಹಂತದಲ್ಲಿದೆ ಎಂದು ವಿವರಿಸಿದರು.