Recent Posts

Sunday, November 10, 2024
ಸುದ್ದಿ

ಬಂಡವಾಳ ಹೂಡಿಕೆ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ಶಾಸಕ ಲೋಬೊ ಆಶಯ – ಕಹಳೆ ನ್ಯೂಸ್

JRLobo
JRLobo

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 2,000 ಕೋ.ರೂ.ಗಳಿಗೂ ಅಧಿಕ ಅನುದಾನದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ಸುಮಾರು 2,500 ಕೋ.ರೂ.ಗಳ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗಿದೆ.

ಇದು ಕ್ಷೇತ್ರದ ಶಾಸಕ ಜೆ.ಆರ್‌. ಲೋಬೊ ಅವರ ಅಭಿಪ್ರಾಯ. ತನ್ನ ಕ್ಷೇತ್ರದ ಸಾಧನೆಗಳೇನು, ಮುಂದಿನ ಅವಧಿಗೆ ಶಾಸಕನಾದರೆ ಮಂಗಳೂರು ನಗರದ ಮತ್ತಷ್ಟು ಅಭಿವೃದ್ಧಿಗೆ ತನ್ನ ಕನಸುಗಳೇನು ಎಂಬ ಕುರಿತು ಅವರು ‘ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಸತಿ ರಹಿತರಿಗೆ ಮನೆ ಒದಗಿಸುವ ನಿಟ್ಟಿನಲ್ಲಿ ಶಕ್ತಿನಗರದ ವಸತಿ ಯೋಜನೆಗೆ ಕಳೆದ ಮೂರು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಪಂಪುವೆಲ್‌ ಬಸ್‌ ನಿಲ್ದಾಣ ಕಾಮಗಾರಿಯೂ ವಿಳಂಬವಾಗಿದ್ದು, ಪ್ರಸ್ತುತ ಪಿಪಿಪಿ ಮಾದರಿಯ ಬಸ್‌ ನಿಲ್ದಾಣ ಮಂಜುರಾತಿ ಅಂತಿಮ ಹಂತದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಆರಂಭದಿಂದಲೂ ನಗರದ ರಸ್ತೆಗಳು, ಫ‌ುಟ್‌ ಪಾತ್‌ ಅಭಿವೃದ್ಧಿ, ಕುಡಿಯುವ ನೀರು, ಒಳಚರಂಡಿ, ಬೀದಿ ದೀಪಗಳು, ಸ್ವಚ್ಛತೆ, ಪಾರ್ಕ್‌, ಮಾರುಕಟ್ಟೆ ಅಭಿವೃದ್ಧಿ ಹೀಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಹಳ ಹೆಚ್ಚಿತ್ತು. ಪ್ರತಿ ಬೇಸಗೆಯಲ್ಲೂ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟನ್ನು 7 ಮೀ. ಗಳಿಗೆ ಏರಿಸ ಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿಗೆ ತೊಂದರೆಯಾಗದು. ಆದರೆ ನೀರಿನ ವಿತರಣೆಯ ವಿಧಾನದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆಯಾಗಬೇಕಿದೆ ಎಂದು ಲೋಬೊ ವಿವರಿಸುತ್ತಾರೆ.

2ನೇ ಎಡಿಬಿ ಯೋಜನೆ
ಪ್ರಸ್ತುತ ಮಂಗಳೂರು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇಲ್ಲಿನ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಕುಸಿದಿದೆ. 1960ರಲ್ಲಿ ಅಳವಡಿಸಿದ ಕೊಳವೆಗಳಲ್ಲೇ ಕೊಳಚೆ ನೀರು ಹರಿಯುತ್ತಿದೆ. ಪ್ರಥಮ ಹಂತದ ಎಡಿಬಿ ಯೋಜನೆಯಲ್ಲಿ ಹಳೆ ಮಂಗಳೂರು ಭಾಗದ ಒಳಚರಂಡಿ ಅಭಿವೃದ್ಧಿಗೆ ಗಮನ ಹರಿಸಿಲ್ಲ. ಹೀಗಾಗಿ ಪ್ರಸ್ತುತ 2ನೇ ಹಂತದ ಎಡಿಬಿಯಲ್ಲಿ ಅದನ್ನು ಸೇರಿಸಲಾಗಿದೆ.

ಸಾಮಾನ್ಯವಾಗಿ ಒಮ್ಮೆ ಎಡಿಬಿಯಲ್ಲಿ ಅನುದಾನ ನೀಡಿದ ಬಳಿಕ ಮತ್ತೂಮ್ಮೆ ನೀಡುವುದಿಲ್ಲ. ಆದರೆ ನಾನು ಅಂದಿನ ನಗರಾಭಿವೃದ್ಧಿ ಸಚಿವ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ 2ನೇ ಹಂತದಲ್ಲಿ ಅನುದಾನ ನೀಡುವಂತೆ ಮಾಡಿದ್ದೇನೆ. ಪ್ರಸ್ತುತ ನಗರದ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿಗೆ ಸುಮಾರು 600 ಕೋ. ರೂ.ಗಳ ಯೋಜನೆ ರೂಪಿಸಲಾಗಿದೆ.

ಪಾರ್ಕ್‌ಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದೇನೆ. ಕದ್ರಿ ಪಾರ್ಕ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪುಟಾಣಿ ರೈಲಿಗೆ 1.5 ಕೋ.ರೂ.ಗಳಲ್ಲಿ ಮರು ಚಾಲನೆ ನೀಡಲಾಗಿದೆ. 6 ಕೋ.ರೂ.ಗಳಲ್ಲಿ ಸಂಗೀತ ಕಾರಂಜಿ ಅನುಷ್ಠಾನ ಮಾಡಲಾಗಿದೆ. ಬಹುತೇಕ ಕಡೆಗಳಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಹಾಕಲಾಗಿದೆ ಎನ್ನುತ್ತಾರೆ ಲೋಬೊ.

ಸಾವಿರ ಆಶ್ರಯ ಮನೆಗಳು
ನಾನು 1999ರಿಂದ 2003ರ ವರೆಗೆ ಮನಪಾ ಆಯುಕ್ತನಾಗಿ ಕೆಲಸ ಮಾಡಿದ್ದು, ಆ ವೇಳೆ ರಾಜೀವನಗರ ಎಂಬ ಕಾಲನಿಯ ಮೂಲಕ ನಿವೇಶನಗಳನ್ನು ನೀಡಲಾಗಿದೆ. ಶಾಸಕನಾದ ಬಳಿಕ 10 ಎಕರೆ ಜಾಗ ಗುರುತಿಸಿ ಬಹು ಮಹಡಿಯ ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಇದಕ್ಕಾಗಿ 75 ಕೋ.ರೂ.ಗಳ ಯೋಜನೆ ರೂಪಿಸಲಾಗಿದೆ. ಬೆಂಗ್ರೆ ಸಹಿತ ಮೊದಲಾದ ಪ್ರದೇಶಗಳಲ್ಲಿ ಸುಮಾರು 2,000 ಹಕ್ಕುಪತ್ರಗಳನ್ನು ವಿತರಿಸಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ
ಸ್ಮಾರ್ಟ್‌ಸಿಟಿ ಯೋಜನೆಯ ಕುರಿತು ನಾವು ನೀಡಿದ ಯೋಜನಾ ವರದಿಯ ಹಿನ್ನೆಲೆಯಲ್ಲಿ ಮೊದಲ ವರ್ಷ ಸ್ಮಾರ್ಟ್‌ ಸಿಟಿ ಅವಕಾಶ ತಪ್ಪಿಹೋಗಿತ್ತು. ಬಳಿಕ ಸ್ಪಷ್ಟ ಚಿಂತನೆಯ ಮೂಲಕ ಯೋಜನಾ ವರದಿ ಸಿದ್ಧಪಡಿಸುವಂತೆ ಕನ್ಸಲ್ಟೆಂಟ್‌ಗಳಿಗೆ ನಿರ್ದೇಶನ ನೀಡಿ, ಮೀನುಗಾರಿಕೆ ಹಾಗೂ ಬಂದರನ್ನು ಮುಂದಿಟ್ಟುಕೊಂಡು ಯೋಜನಾ ವರದಿ ಸಿದ್ಧಪಡಿಸಿದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿ ಅವಕಾಶ ಸಿಕ್ಕಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಹಂತದಲ್ಲಿದ್ದು, ಸೆಂಟ್ರಲ್‌ ಮಾರುಕಟ್ಟೆಯೂ ಇದೇ ಯೋಜನೆಯಲ್ಲಿ ನವೀಕರಣಗೊಳ್ಳಲಿದೆ. ಜತೆಗೆ ಅಮೃತ್‌ ಯೋಜನೆಯಲ್ಲಿ 200 ಕೋ.ರೂ. ಪ್ರಿಮಿಯಮ್‌ ಎಫ್‌ಐಆರ್‌ನಲ್ಲಿ ಸುಮಾರು 220 ಕೋ.ರೂ. ಯೋಜನೆ ಸಿದ್ಧವಾಗಿದೆ. ಜತೆಗೆ ವೆನ್ಲಾಕ್‌ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಎಲ್ಲ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೂ ಅನುದಾನ ನೀಡಿದ ತೃಪ್ತಿ ನನಗಿದೆ.

ಮೀನುಗಾರಿಕೆ ಇಲ್ಲಿನ ಪ್ರಮುಖ ಉದ್ಯಮವಾಗಿದ್ದು, 3ನೇ ಹಂತದ ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಲಕ್ಷದ್ವೀಪದ ವ್ಯಾಪಾರವನ್ನು ಮತ್ತೆ ಮಂಗಳೂರು ಕಡೆಗೆ ತರುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ನಿಯೋಗ ಅಲ್ಲಿನ ಆಡಳಿತಾಧಿಕಾರಿಗಳ ಜತೆ ಚರ್ಚಿಸಿದ್ದು, ಮುಂದೆ ಅಲ್ಲಿನ ನಿಯೋಗ ಕರ್ನಾಟಕಕ್ಕೆ ಬರಲಿದೆ.

ನೇತ್ರಾವತಿ ಸೇತುವೆಯಿಂದ ಕಣ್ಣೂರು ಮಸೀದಿಯ ತನಕ ನೇತ್ರಾವತಿ ನದಿ ದಡ ಅಭಿವೃದ್ಧಿ ಹಾಗೂ ರಸ್ತೆ ನಿರ್ಮಾಣ, ನೇತ್ರಾವತಿ ಸೇತುವೆಯಿಂದ ನದಿ ದಡದಲ್ಲಿ ಮೀನುಗಾರಿಕಾ ಬಂದರು, ಹಳೆ ಬಂದರು, ಬೊಕ್ಕಪಟ್ಣ ಮೂಲಕ ಬೆಂಗ್ರೆಯಾಗಿ ನವಮಂಗಳೂರು ಬಂದರು ಸಂಪರ್ಕ ರಸ್ತೆ ಅಭಿವೃದ್ಧಿಯ ಚಿಂತನೆಯಿದೆ.

ಶಾಂತಿ ಸುವ್ಯವಸ್ಥೆಗೆ ಆದ್ಯತೆ
ಐಟಿ ಅಭಿವೃದ್ಧಿ, ಪ್ರವಾಸೋದ್ಯಮ, ಕೈಗಾರಿಕೆ, ಹೆಲ್ತ್‌ ಟೂರಿಸಂ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾದಾಗ ನಗರ ಅಭಿವೃದ್ಧಿಯಾಗುವ ಜತೆಗೆ ಉದ್ಯೋಗವಕಾಶಗಳೂ ಹೆಚ್ಚುತ್ತವೆ. ಆಗ ಯುವಜನತೆ ಉದ್ಯೋಗ ಅರಸಿಕೊಂಡು ದೂರದೂರಿಗೆ ತೆರಳುವ ಪ್ರಮೇಯವೂ ತಪ್ಪಲಿದೆ. ನನ್ನ ಮುಂದಿನ ಅವಧಿಯಲ್ಲಿ ಈ ಕುರಿತು ಹೆಚ್ಚಿನ ಚಿಂತನೆ ನಡೆಸಲು ಯೋಚಿಸಲಾಗಿದೆ. ಈ ಮೂಲಕ ಮಂಗಳೂರು ನಗರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಆಲೋಚನೆ ಇದೆ. ಅಂತಾರಾಷ್ಟ್ರೀಯ ಕ್ರೀಡಾ ಗ್ರಾಮವನ್ನೂ ನಿರ್ಮಾಣ ಮಾಡುವ ಆಲೋಚನೆ ಇದೆ. ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆಗೂ ಸಾಕಷ್ಟು ಪ್ರಯತ್ನಗಳು ನಡೆದಿರುತ್ತವೆ. ನಗರದಲ್ಲಿ ಶಾಂತಿ – ಸುವ್ಯವಸ್ಥೆ ಇದ್ದಾಗ ಹೊರಗಿನವರು ಯಾವುದೇ ಆತಂಕವಿಲ್ಲದೆ ಬಂಡವಾಳ ಹೂಡಿಕೆಗೆ ಮುಂದೆ ಬರುತ್ತಾರೆ. ಹೀಗಾಗಿ ನಗರದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರಿಗೆ ಮುಕ್ತ ಅವಕಾಶವನ್ನೂ ನೀಡಲಾಗಿದೆ ಎಂದು ಲೋಬೊ ವಿವರಿಸುತ್ತಾರೆ .

3ಡಿ ಪ್ಲಾನೆಟೋರಿಯಂ ಅನುಷ್ಠಾನ 
ಪಿಲಿಕುಳ ಅಭಿವೃದ್ಧಿಯ ಕುರಿತಂತೆ 18 ವರ್ಷ ದುಡಿದಿದ್ದೇನೆ. ಯಾರೂ ಏನೇ ಹೇಳಿದರೂ ಇಲ್ಲಿನ 3ಡಿ ಪ್ಲಾನೆಟೋರಿಯಂ ಅನುಷ್ಠಾನದ ಕುರಿತು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಜತೆಗೆ ಅದನ್ನು ಒಂದು ಹಂತಕ್ಕೆ ತಂದ ತೃಪ್ತಿ ನನ್ನಲ್ಲಿದೆ. ಮುಂದೆ ಪಿಲಿಕುಳವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪ್ರಾಧಿಕಾರದ ಅನುಷ್ಠಾನದ ಚಿಂತನೆಯೂ ನನ್ನ ಮುಂದಿದೆ ಎನ್ನುವುದು ಲೋಬೊ ಆಶಯ.