ಮಕ್ಕಳ ಆನ್ ಲೈನ್ ತರಗತಿಗಾಗಿ ಕುಟುಂಬದ ಏಕೈಕ ಆದಾಯವಾಗಿದ್ದ ಹಸುವನ್ನು ಮಾರಿ ಮೊಬೈಲ್ ಖರೀದಿಸಿದ ತಂದೆ- ಕಹಳೆ ನ್ಯೂಸ್
ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಓರ್ವ ವ್ಯಕ್ತಿ ತನ್ನ ಇಬ್ಬರು ಮಕ್ಕಳು ತಮ್ಮ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಮೊಬೈಲ್ ಫೋನ್ ಖರೀದಿಸಲು ತನ್ನ ಏಕೈಕ ಆದಾಯದ ಮೂಲವಾದ ಹಸುವನ್ನು ಮಾರಿರುವ ಘಟನೆ ನಡೆದಿದ್ದು, ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ.
ಕೊರೋನಾದಿಂದಾಗಿ ಮಾರ್ಚ್‌ನಲ್ಲಿ ಶಾಲೆಗಳು ಮುಚ್ಚಿದ ನಂತರ, 4 ಮತ್ತು 2 ನೇ ತರಗತಿಯಲ್ಲಿ ಓದುತ್ತಿರುವ ಅವರ ಮಕ್ಕಳು ಸ್ಮಾರ್ಟ್‌ಫೋನ್ ಇಲ್ಲದಿರುವುದರಿಂದ ತಮ್ಮ ಅಧ್ಯಯನವನ್ನು ಮುಂದುವರಿಸುವುದು ಕಷ್ಟಕರವಾಗಿತ್ತು ಎಂದು ಕಾಂಗ್ರಾ ಜಿಲ್ಲೆಯ ಜ್ವಾಲಮುಖಿಯ ಕುಲದೀಪ್ ಕುಮಾರ್ ಹೇಳಿದ್ದಾರೆ.
ಕರೋನವೈರಸ್ ಕಾರಣದಿಂದಾಗಿ ಲಾಕ್ಡೌನ್ ಹೇರಿದ ನಂತರ, ಶಾಲೆಗಳು ಆನ್‌ಲೈನ್‌ನಲ್ಲಿ ಮೂಡಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಮನ್ ಅವರ ಮಕ್ಕಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕೆಂದು ಹೇಳಿದ್ದರು. ಮಕ್ಕಳು ತಮ್ಮ ಅಧ್ಯಯನವನ್ನು ಮುಂದುವರೆಸಲು ಬಯಸಿದರೆ, ಅವರಿಗೆ ಸ್ಮಾರ್ಟ್‌ಫೋನ್ ಅಗತ್ಯವಿದೆ ಎಂದು ಶಿಕ್ಷಕರು ಹೇಳಿದ್ದರು ಎಂದು ಕುಲದೀಪ್ ಅವರು ತಿಳಿಸಿದ್ದಾರೆ.
ಕುಲದೀಪ್ ಕುಮಾರ್ ಅವರು 6,000 ರೂ.ಗಳ ಸಾಲಕ್ಕಾಗಿ ಬ್ಯಾಂಕುಗಳು ಮತ್ತು ಹಣ ಸಾಲ ನೀಡುವವರನ್ನು ಸಂಪರ್ಕಿಸಿದ್ದಾರೆ, ಆದರೆ ಅವರ ಆರ್ಥಿಕ ಸ್ಥಿತಿಯ ಕಾರಣ ಯಾರೂ ಸಹಾಯ ಮಾಡಲಿಲ್ಲ ಎಂದು ಹೇಳಿದರು. ಕೊನೆಗೆ ತಮ್ಮ ಏಕೈಕ ಆದಾಯದ ಮೂಲವಾದ ತನ್ನ ಹಸುವನ್ನು 6,000 ರೂಗಳಿಗೆ ಮಾರಾಟ ಮಾಡಿ, ಅದರಿಂದ ಬಂದ 6,000 ರೂ.ಗಳಿಂದ ತಮ್ಮ ಮಕ್ಕಳಿಗಾಗಿ ಸ್ಮಾರ್ಟ್ಫೋನ್ ಖರೀದಿಸಿದರು.
ಕುಲದೀಪ್, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಜ್ವಾಲಾಮುಖಿಯಲ್ಲಿ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ತನ್ನ ಬಳಿ ಬಿಪಿಎಲ್ ಕಾರ್ಡ್ ಕೂಡ ಇಲ್ಲ ಎಂದು ಹೇಳುತ್ತಾರೆ. ಆರ್ಥಿಕ ಸಹಾಯಕ್ಕಾಗಿ ತಾನು ಅನೇಕ ಬಾರಿ ಪಂಚಾಯತ್ ಅನ್ನು ಸಂಪರ್ಕಿಸಿದ್ದೇನೆ, ಆದರೆ ಇದುವರೆಗೆ ಏನೂ ಸಹಾಯ ದೊರೆತಿಲ್ಲ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಕುಲದೀಪ್ ಕುಮಾರ್ ಅವರಿಗೆ ತಕ್ಷಣ ಆರ್ಥಿಕ ನೆರವು ನೀಡುವಂತೆ ಬಿಡಿಒ ಮತ್ತು ಎಸ್‌ಡಿಎಂಗೆ ನಿರ್ದೇಶನ ನೀಡಿದ್ದೇನೆ ಎಂದು ಜ್ವಾಲಮುಖಿ ಶಾಸಕ ರಮೇಶ್ ಧವಾಲಾ ತಿಳಿಸಿದ್ದಾರೆ.