ನವದೆಹಲಿ: ‘ಮನ್ ಕಿ ಬಾತ್’ನಲ್ಲಿ ಇಂದು ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದು, ದೇಶದ ಜನತೆ ಸ್ವಾವಲಂಬಿಗಳಾಗಬೇಕು. ಸ್ವಾವಲಂಬಿಗಳಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಸ್ವಾವಲಂಬಿ ಬದುಕಿಗೆ ಲಡಾಖ್ ಜನರು ಮಾದರಿಯಾಗಿದ್ದಾರೆ. ಅವರು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಲಡಾಖ್ ನಲ್ಲಿ ಬದುಕಬೇಕಾದರೆ ಸ್ವಾವಲಂಬನೆ ಅನಿವಾರ್ಯವಾಗಿದೆ. ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗಬೇಕಿದೆ. ನಮಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಬೇಕು. ಸ್ವಾವಲಂಬಿ ಭಾರತ ಕಟ್ಟಲು ಇಡೀ ದೇಶ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.
ಈ ಬಾರಿ ರಕ್ಷಾಬಂಧನವನ್ನು ವಿಶಿಷ್ಟವಾಗಿ ಆಚರಿಸೋಣ ಎಂದು ಹೇಳಿದ ಪ್ರಧಾನಿ, ರಕ್ಷಾಬಂಧನದ ಶುಭಾಶಯಗಳನ್ನು ಹೇಳಿದ್ದಾರೆ. ಎಲ್ಲರೂ ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ವೈದ್ಯರು, ನರ್ಸ್ ಗಳು, ವೈದ್ಯಕೀಯ ಸಿಬ್ಬಂದಿ ಬಗ್ಗೆ ಯೋಚಿಸಿ. ನಿಯಮಗಳನ್ನು ಪಾಲಿಸಿ ಎಂದು ಹೇಳಿದ್ದಾರೆ.
ಸಂಪೂರ್ಣ ಸಂಕಷ್ಟದ ವೇಳೆ ಹಳ್ಳಿಗಳು ದೇಶಕ್ಕೆ ಮಾದರಿಯಾಗಿವೆ. ಗ್ರಾಮಸ್ಥರಿಂದ ಕ್ವಾರಂಟೈನ್ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಗ್ರಾಮಸ್ಥರು ಸ್ಯಾನಿಟೇಷನ್ ಮಾಡಿದ್ದಾರೆ. ಕಷ್ಟದಲ್ಲಿ ಇರುವವರಿಗೆ ನೆರವಾಗಿದ್ದಾರೆ. ಸ್ವಯಂ ಸಂಘಗಳು ಮಾಸ್ಕ್ ತಯಾರಿಸಿದ್ದು ಇದರಿಂದ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ಬಿದಿರಿನಿಂದ ನೀರಿನ ಬಾಟಲಿ, ಊಟದ ಡಬ್ಬಿ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ನಿಯಂತ್ರಿಸುವಲ್ಲಿ ದೇಶ ಯಶಸ್ವಿಯಾಗುತ್ತಿದೆ. ಭಾರತ ವೇಗವಾಗಿ ಬದಲಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿದೆ. ದೇಶವನ್ನು ಕಟ್ಟುವಲ್ಲಿ ಯುವಕರು ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.