ಖ್ಯಾತ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ರ ಪುತ್ರ ಆದಿತ್ಯ ನಾರಾಯಣ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ರಾಯ್ಪುರದಲ್ಲಿ ಇಂಡಿಗೋ ವಿಮಾನದ ಸಿಬ್ಬಂದಿಗೆ ಬೆದರಿಕೆ ಹಾಕುವ ಮೂಲಕ ಸುದ್ದಿಯಾಗಿದ್ದ ಆದಿತ್ಯ, ಈಗ ಅಪಘಾತವೆಸಗಿ ಇಬ್ಬರನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ.
ಘಟನೆ ಮುಂಬೈನ ಅಂಧೇರಿಯ ಲೋಕಂಡ್ ವಾಲಾ ಬ್ಯಾಕ್ ರೋಡ್ ನ ಇಂದ್ರಲೋಕ್ ಕಟ್ಟಡದ ಬಳಿ ಭಾನುವಾರ ರಾತ್ರಿ 12-30 ರ ಸುಮಾರಿಗೆ ನಡೆದಿದ್ದು, ತಮ್ಮ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ವೇಗವಾಗಿ ಬಂದ ಆದಿತ್ಯ, ಯು ಟರ್ನ್ ತೆಗೆದುಕೊಳ್ಳುವ ವೇಳೆ ಆಟೋರಿಕ್ಷಾವೊಂದಕ್ಕೆ ಹಿಂಬದಿಯಿಂದ ಗುದ್ದಿದ್ದಾರೆ.
ಇದರಿಂದಾಗಿ ಆಟೋ ಚಾಲಕ 64 ವರ್ಷದ ರಾಜಕುಮಾರ್ ಪಾಲೇಕರ್ ಹಾಗೂ ಆಟೋದಲ್ಲಿ ಪ್ರಯಾಣಿಸುತ್ತಿದ್ದ 32 ವರ್ಷದ ಸುರೇಖಾ ಶಿವೇಕರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಮ್ಮ ಕಾರಿನಲ್ಲೇ ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ಕರೆದೊಯ್ದ ಆದಿತ್ಯ ನಾರಾಯಣ್, ಚಿಕಿತ್ಸೆ ಕೊಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೋಮವಾರದಂದು ಆದಿತ್ಯ ನಾರಾಯಣ್ ರನ್ನು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕಾರು ಚಾಲನೆ ವೇಳೆ ಆದಿತ್ಯ ನಾರಾಯಣ್ ಮದ್ಯಪಾನ ಮಾಡಿದ್ದರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮೇಲ್ನೋಟಕ್ಕೆ ಆದಿತ್ಯ ನಾರಾಯಣ್ ಮದ್ಯ ಸೇವಿಸಿದಂತೆ ಕಂಡು ಬರುತ್ತಿಲ್ಲವೆಂದು ಹೇಳಿರುವ ಪೊಲೀಸರು ವೈದ್ಯಕೀಯ ಪರೀಕ್ಷಾ ವರದಿ ಬಂದ ಬಳಿಕ ಖಚಿತಪಡಲಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.