Recent Posts

Friday, November 22, 2024
ಉಡುಪಿರಾಷ್ಟ್ರೀಯ

‘ ರಾಮ ಮಂದಿರ ಭೂಮಿ ಪೂಜೆಯನ್ನು ಹಬ್ಬವಾಗಿ ಆಚರಿಸೋಣ’ ; ಸುದ್ದಿಗೋಷ್ಠಿಯಲ್ಲಿ ಪೇಜಾವರ ಸ್ವಾಮೀಜಿ – ಕಹಳೆ ನ್ಯೂಸ್

ಉಡುಪಿ, ಆ. 02 : ”ಅಯೋಧ್ಯೆಯಲ್ಲಿರುವ ರಾಮ ಮಂದಿರವು ಇಡೀ ಹಿಂದೂ ಸಮಾಜದ ಕನಸಾಗಿದ್ದು ಆಗಸ್ಟ್ 5 ರಂದು ನಡೆಯುವ ಭವ್ಯ ದೇವಾಲಯದ ಭೂಮಿ ಪೂಜೆಯ ಸಮಾರಂಭವನ್ನು ಪ್ರತಿಯೊಬ್ಬರು ಹಬ್ಬವಾಗಿ ಆಚರಿಸಬೇಕು” ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಕರೆ ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

 

“ಭಗವಂತ ರಾಮನ ಆರಾಧನೆಯನ್ನು ನಾವು ಮುಂದುವರೆಸಬೇಕು. ಕೊರೊನಾ ಪರಿಸ್ಥಿತಿಯ ಸಂದರ್ಭದಲ್ಲಿಯೂ ಈ ಐತಿಹಾಸಿಕ ದಿನವನ್ನು ವೀಕ್ಷಿಸ ಬಹುದಾಗಿದೆ. ಜನರು ತಮ್ಮ ಮನೆಗಳಲ್ಲಿ ನೇರ ಪ್ರದರ್ಶನವನ್ನು ವೀಕ್ಷಿಸಬಹುದು” ಎಂದು ಅವರು ಹೇಳಿದರು.

ಆಗಸ್ಟ್ 1 ರ ಶನಿವಾರದಂದು ನೀಲಾವರ ಗೋಶಾಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಜನರು ಶ್ರೀ ರಾಮ ಮಂತ್ರವನ್ನು ಪ್ರತಿದಿನ ಕನಿಷ್ಠ 108 ಬಾರಿ ಜಪಿಸಬೇಕು. ಪಾರಾಯಣ ಮತ್ತು ಭಜನೆ ಮಾಡಬೇಕು. ಭಕ್ತರು ರಾಮನ ನಾಮ ಸ್ಮರಣೆ ಮಾಡಬೇಕು. ನಾವೆಲ್ಲರೂ ಈ ಆಚರಣೆಯಲ್ಲಿ ಭಾಗವಹಿಸೋಣ” ಎಂದು ಹೇಳಿದರು.

ಆಗಸ್ಟ್ 5 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದೆ.

ಇನ್ನು ಅದೇ ದಿನ ನೀಲಾವರ ಗೋಶಾಲೆಯಲ್ಲಿ ಶ್ರೀ ರಾಮ, ಕೃಷ್ಣ, ವಿಟ್ಟಲರಿಗೆ ಒಂದು ಲಕ್ಷ ತುಳಸಿ ಎಲೆಗಳನ್ನು ಅರ್ಪಿಸಲಾಗುವುದು. ಈ ಪೂಜೆಗೆ ಭಕ್ತರು ಆಗಸ್ಟ್ 4 ರ ಮಧ್ಯಾಹ್ನಕ್ಕೂ ಮುನ್ನ ತುಳಸಿ ಎಲೆಗಳನ್ನು ಪೇಜಾವರ ಮಠ ಉಡುಪಿ ಅಥವಾ ನೀಲಾವರ ಗೋಶಾಲೆಗೆ ತಂದು ಅರ್ಪಿಸಬಹುದು. ಅದೇ ದಿನ ನವಗ್ರಹ ಯಾಗ ಮತ್ತು ಮುಖ್ಯಾಪ್ರಾಣ ಯಾಗ, ಭಜನೆ, ಮತ್ತು ಪಾರಾಯಣ ನಡೆಯಲಿದೆ.

“ಕರ್ನಾಟಕದ ಉಡುಪಿ ಹಾಗೂ ಅಯೋಧ್ಯೆಯ ನಡುವೆ ನಿಕಟ ಸಂಬಂಧವಿದೆ ಎಂದು ನಾನು ನಂಬುತ್ತೇನೆ. ಈ ಚಳುವಳಿಯನ್ನು ಕೃಷ್ಣೈಕ್ಯರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕೊನೆಯವರೆಗೂ ಮುನ್ನಡೆಸಿದರು” ಎಂದು ಸ್ವಾಮೀಜಿ ಹೇಳಿದರು.

”ಇದು ಹಿಂದೂ ಸಮಾಜದ ಎಲ್ಲ ಜನರಿಗೆ ಐತಿಹಾಸಿಕ ದಿನವಾಗಲಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಲಂಕಾರ ಮಾಡಿ, ಭಗಧ್ವಜವನ್ನು ಮನೆಯ ಛಾವಣಿಯ ಮೇಲೆ ಹಾಕಬೇಕು. ಹಾಗೆಯೇ ಮನೆಯಲ್ಲಿ ದೀಪವನ್ನು ಬೆಳಗಬೇಕು. ಹಾಗೆಯೇ ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು” ಎಂದು ಸುನಿಲ್ ಕೆ ಆರ್ ಹೇಳಿದರು.

ಇನ್ನು ಅಯೋಧ್ಯೆಯ ಭೂಮಿ ಪೂಜೆಯಲ್ಲಿ ಪೇಜಾವರ ಸ್ವಾಮೀಜಿಯವರು ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದು ಪ್ರಸ್ತುತ ನೀಲಾವರ ಗೋಶಾಲೆಯಲ್ಲಿ ಚಾರ್ತುಮಾಸ ವ್ರತವನ್ನು ನಡೆಸುತ್ತಿದ್ದು ಶಾಸ್ತ್ರಗಳ ಪ್ರಕಾರ, ಈ ಚಾರ್ತುಮಾಸ ವ್ರತದ ಅವಧಿ ಮುಗಿಯುವವರೆಗೂ ಸ್ಥಳ ಅಥವಾ ಮಠವನ್ನು ಬಿಟ್ಟುಹೋಗುವಂತಿಲ್ಲ. ಆ ಕಾರಣ ಗೋಶಾಲೆಯಲ್ಲಿ ಪೂಜೆ ಮಾಡುವ ಮೂಲಕ ಭೂಮಿ ಪೂಜೆಯ ದಿನವನ್ನು ಆಚರಿಸುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಮಾತೃ ಶಕ್ತಿ ಮಂಡಳಿಯ ಪೂರ್ಣಿಮಾ ಸುರೇಶ್ ನಾಯಕ್ ಮತ್ತು ಭಜರಂಗದಳದ ಸುರೇಂದ್ರ ಕೋಟೇಶ್ವರ ಉಪಸ್ಥಿತರಿದ್ದರು.